ವಿಜಯಪುರ : ರಾಜ್ಯ ಸರಕಾರದಲ್ಲಿ ಉಳಿದಿರುವ ನಾಲ್ಕು ಸಚಿವ ಸ್ಥಾನದಲ್ಲಿ ವಿಜಯಪುರಕ್ಕೆ ಸಚಿವ ಸ್ಥಾನ ದೊರೆತರೆ ಮುಂದಿನ ಸಿಂದಗಿ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಮೂಡುತ್ತದೆ. ಇಲ್ಲವಾದರೆ ಬಿಜೆಪಿ ಪಕ್ಷ ಸಂಪೂರ್ಣ ಹಾಳಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದರು.
ನಗರದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಕೆಲವು ಜಿಲ್ಲೆಗಳಿಗೆ ಮಾತ್ರ ಸಚಿವ ಸ್ಥಾನ ಮೀಸಲಾಗಿದೆ. ಶಿವಮೊಗ್ಗ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಗೆ ಮಂತ್ರಿ ಸ್ಥಾನ ಲಭಿಸಿದೆ. ಉಳಿದ ಬಹುತೇಕ ಜಿಲ್ಲೆಗಳಿಗೆ ಸಂಪುಟದಲ್ಲಿ ಸ್ಥಾನ ನೀಡಿಲ್ಲ. ಯಾಕೆ ಆ ಜಿಲ್ಲೆಯ ಜನ ಮತ ಹಾಕಿಲ್ಲವೇ ಎಂದು ತಮ್ಮ ಸರ್ಕಾರವನ್ನೇ ಪ್ರಶ್ನಿಸಿದರು.
ಮುಂದಿನ ಚುನಾವಣೆಗೆ ಟಿಕೆಟ್ ಗ್ಯಾರಂಟಿ : 2023ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಸಿಗುತ್ತಾ? ಎನ್ನುವ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ನನ್ನ ಬಿಟ್ಟು ಬೇರೆ ಯಾರಿಗೂ ಕೊಡುವ ಮಾತೇ ಇಲ್ಲ. ನಗರದಲ್ಲಿ ಅಧಿವೃದ್ಧಿ ಕಾರ್ಯ ಮಾಡಿದ್ದೇನೆ. ಹಿಂದುತ್ವವಾದಿಯಾಗಿದ್ದು, ಹೈಕಮಾಂಡ್ ಕೃಪಾಕಟಾಕ್ಷ ನನ್ನ ಮೇಲೆ ಇದೆ ಎಂದರು.
ನನ್ನ ಹೋರಾಟದಿಂದಲೇ ಬಿಎಸ್ವೈ ಪದತ್ಯಾಗ : ನಾನು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರನ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಪರಿಣಾಮವಾಗಿ ಇಂದು ಬಿಎಸ್ವೈ ಅಧಿಕಾರ ಕಳೆದುಕೊಳ್ಳಬೇಕಾಯಿತು. ವಿಜಯೇಂದ್ರನ ಅವ್ಯವ್ಯಹಾರ ಸ್ಥಗಿತವಾಗಿದೆ ಎಂದರು.
ಅಪ್ಪುಪಟ್ಟಣಶೆಟ್ಟಿ ವಿರುದ್ಧ ಗರಂ : ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಕುರಿತ ಪ್ರಶ್ನೆಯೊಂದಕ್ಕೆ ಗರಂ ಆದ ಯತ್ನಾಳ್, ಹಾದಿ ಬೀದಿ ಹಂದಿ-ನಾಯಿಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ಉಸ್ತುವಾರಿ ಸಚಿವರನ್ನು ಹೊಗಳಿದ ಯತ್ನಾಳ್ : ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ್ ಹಾಡಿ ಹೊಗಳಿದರು. ವಿಜಯಪುರ ಉಸ್ತುವಾರಿ ವಹಿಸಿಕೊಂಡ ಮೇಲೆ ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಹೀಗೆ ಇನ್ನೂ ಹಲವಾರು ರಾಜಕೀಯ ಮತ್ತು ವೈಯಕ್ತಿಕ ವಿಚಾರಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡರು.