ವಿಜಯಪುರ: ಯಾರ ಹಣೆ ಬರಹದಲ್ಲಿ ಏನಿದೆ ಯಾರಿಗೆ ಗೊತ್ತು, 2024ರಲ್ಲಿ ನಾನು ಸಿಎಂ ಆಗೋದಿದ್ರೆ ಯಾರು ಕಸಿದುಕೊಳ್ಳಲಾಗುವುದಿಲ್ಲ. ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ವಿಜಯಪುರ ನಗರದ ಶಾಸಕ ಬಸನಗೌಡ ಯತ್ನಾಳ ಹೇಳಿದ್ದಾರೆ.
ನನ್ನ ಹಣೆಯ ಬರಹದಲ್ಲಿ ಸಿಎಂ ಆಗೋದು ಬರೆದಿದ್ರೆ, ನಾನು 2024 ರಲ್ಲಿ ಸಿಎಂ ಆಗೇ ಆಗುತ್ತೇನೆ ಎಂದು ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೂ ಲಕ್ಷ್ಮಣ ಸವದಿ ಡಿಸಿಎಂ ವಿಚಾರವಾಗಿ ಮಾತನಾಡಿ, ಅವರ ಹಣೆ ಬರಹದಲ್ಲಿ ಡಿಸಿಎಂ ಆಗಬೇಕು ಅಂತಾ ಬರದಿತ್ತು ಹಾಗಾಗಿ ಆಗಿದ್ದಾರೆ. ಮುಂದೆಯೂ ಡಿಸಿಎಂ ಆಗಿಯೇ ಮುಂದುವರೆಬೇಕು ಎಂದು ಬರೆದಿದ್ರೆ ಮುಂದುವರೆಯುತ್ತಾರೆ ಎಂದರು.
ಹುಕ್ಕೇರಿ ಮತಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಸಚಿವ ಸ್ಥಾನಕ್ಕಾಗಿ ತೆರೆ ಹಿಂದೆ ಲಾಭಿ ನಡೆಸುತ್ತಿರೋ ಕುರಿತಾಗಿ ಮಾತನಾಡಿದ ಅವರು, ಉಮೇಶ ಕತ್ತಿ ಸಚಿವರಾಗೋದು ಪಕ್ಕಾ. ಸುಮ್ಮನೆ ಸಚಿವ ಸ್ಥಾನಕ್ಕಾಗಿ ಸಿಎಂ ಸುತ್ತ ಗಿರಕಿ ಹೊಡೆಯೋದು ಸರಿಯಲ್ಲ. ಅಥಣಿ ಹಾಗೂ ಕಾಗವಾಡ ಉಪಚುನಾವಣೆಯಲ್ಲಿ ಬಿಜೆಪಿ ಸ್ಥಾನಗಳು ಗೆದ್ರೆ ಕತ್ತಿಯವರು ಸಚಿವರಾಗೋದು ಖಂಡಿತಾ ಅಂತಾ ನಾವು, ನಾಯಕರು ಎಲ್ಲರೂ ಹೇಳಿದ್ದೆವು, ಅವರು ಆತಂಕಪಡುವ ಅಗತ್ಯವಿಲ್ಲ. ಅವರಿಗೆ ಸಚಿವ ಸ್ಥಾನ ಸಿಗುತ್ತೆ ಎಂಬ ವಿಶ್ವಾಸ ನಮಗಿದೆ ಎಂದರು.
ಬಿಜೆಪಿ ಶಾಸಕ ಮರಾಠರ ಪರವಾದ ಹೇಳಿಕೆಗೆ ಉತ್ತರಿಸಿದ ಯತ್ನಾಳ, ಎಲ್ಲ ಕಡೆ ರಾಜಕಾರಣ ಬೇರೆ, ಆದರೆ ಬೆಳಗಾವಿ ರಾಜಕಾರಣ ಬೇರೆ. ಅವರಿಗೆ ಮರಾಠರ ಓಟ್ ಬೇಕು ಹಾಗಾಗಿ ಅವರ ಪರ ಹೇಳಿಕೆ ಕೊಡ್ತಾರೆ. ಇಲ್ಲವಾದ್ರೆ ಚುನಾವಣೆಯಲ್ಲಿ ಲಾಗಾ ಹೊಡಿತ್ತಾರೆ. ಮನಸಿನಿಂದ ಅಲ್ಲದಿದ್ದರೂ ಓಟ್ಗಾಗಿ ಹಾಗೆ ಹೇಳಬೇಕಾಗುತ್ತದೆ ಎಂದರು.
ಮಹಾರಾಷ್ಟ್ರ ಗಡಿ ಕ್ಯಾತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಹಾರಾಷ್ಟ್ರದವರು ಗಡಿ ಕ್ಯಾತೆ ಬಿಡಬೇಕು. ಶಿವಸೇನೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕು, ಬೆಳಗಾವಿ ತಮ್ಮದು ಅಂದ್ರೆ ನಾವು ಬಿಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು. ನಾವೇನು ಕೈಗೆ ಬಳೆ ಹಾಕಿಕೊಂಡಿಲ್ಲ. ಇನ್ನೂ ಐದು ವರ್ಷ ಅಲ್ಲ ಮತ್ತೊಬ್ಬರು ಹುಟ್ಟಿ ಬಂದ್ರು ಬೆಳಗಾವಿ ತಗೋಳಕ್ಕಾಗಲ್ಲ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಸಿದ್ರು.