ಮುದ್ದೇಬಿಹಾಳ: ಕೃಷಿ ಚಟುವಟಿಕೆ ಚುರುಕುಗೊಳ್ಳುವ ಹಿನ್ನೆಲೆ, ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಪಡೆದುಕೊಳ್ಳಲು ಬರುವ ರೈತರಿಗೆ ಸರದಿ ಸಾಲಿನಲ್ಲಿ ನಿಲ್ಲಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಬೀಜ ಬಿತ್ತಲು ರಿಯಾಯಿತಿ ದರದಲ್ಲಿ ತೊಗರಿ ಹಾಗೂ ಹೆಸರು ಬಿತ್ತನೆ ಬೀಜವನ್ನು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾಯಿತು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರಾಜೇಶ್ವರಿ ನಾಡಗೌಡ ಮಾತನಾಡಿ, ಮುಂಬರುವ ದಿನಗಳಲ್ಲಿ ಮುಸುಕಿನ ಜೋಳ, ಸಜ್ಜೆ ಬೀಜ ವ್ಯವಸ್ಥೆ ಮಾಡಲಾಗುವುದು. ಗರಿಷ್ಠ 5 ಎಕರೆ ಭೂ ಹಿಡುವಳಿಗೆ ಆಗುವಷ್ಟು ಬೀಜ ನೀಡಲಾಗುವುದು. ಉಳಿದ ಹೊಲಕ್ಕೆ ಬೇರೆ ಲಭ್ಯವಿರುವ ಬೀಜಗಳನ್ನು ನೀಡಲಾಗುವುದು. ಜೊತೆಗೆ ಬೆಳೆ ವೈವಿಧ್ಯತೆ ಕಾಪಾಡುವ ಸಲುವಾಗಿ, ಒಂದು ಬೆಳೆ ಸರಿಯಾಗಿ ಬಾರದೆ ಹೋದರೆ , ಬೇರೆ ಬೆಳೆ ರೈತನಿಗೆ ಆಸರೆಯಾಗಲಿ ಎನ್ನುವ ಉದ್ದೇಶದಿಂದ ಪರ್ಯಾಯ ಬೀಜ ವಿತರಿಸಲಾಗುವುದು ಎಂದು ತಿಳಿಸಿದರು.
ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪಿ.ಕೆ.ಪಾದಗಟ್ಟಿ ಮಾತನಾಡಿ, ಕೊರೊನಾ ಹಿನ್ನಲೆ ವೃದ್ಧರು, ಮಕ್ಕಳು ಬಿತ್ತನೆ ಬೀಜ ಖರೀದಿಗೆ ಬರಬಾರದು. ಮಾಸ್ಕ್ ಇಲ್ಲದೇ ಯಾರೂ ಕೃಷಿ ಇಲಾಖೆಗೆ ಬರಬಾರದು. ಸಾಮಾಜಿಕ ಅಂತರ ಅವಶ್ಯಕ ಎಂದು ಹೇಳಿದರು. ಈ ವೇಳೆ ಎ.ಎ.ಬಾಗವಾನ, ಎ.ಬಿ.ಇಟಗಿ ಮತ್ತಿತರರು ಇದ್ದರು.