ವಿಜಯಪುರ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ಯಡವಟ್ಟಿನಿಂದ ಡಯಾಲಿಸಿಸ್ ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಬಿಸ್ಮಿಲ್ಲಾ ಸೈಫನಸಾಬ್ ನದಾಫ್ ಮೃತಪಟ್ಟ ದುರ್ದೈವಿ. ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದ ಸಿಬ್ಬಂದಿ ಬಸವರಾಜ್ ಎಂಬಾತನಿಂದ ಈ ಯಡವಟ್ಟು ಆಗಿದೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
''ಮಂಗಳವಾರ ಬೆಳಗ್ಗೆ ಡಯಾಲಿಸಿಸ್ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಆಗಮಿಸಿದ್ದೆವು. ಸಂಜೆಯಿಂದ ರಾತ್ರಿವರೆಗೂ ಆಸ್ಪತ್ರೆಯಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ಇಂದು ಬೆಳಗ್ಗೆ ಫೋನ್ ಮಾಡಿದ ಬಳಿಕ 12 ಗಂಟೆಗೆ ಬಸವರಾಜ್ ಎಂಬಾತ ಆಗಮಿಸಿದ್ದಾನೆ. ಆದರೆ, ನಶೆಯಲ್ಲಿ ಡಯಾಲಿಸಿಸ್ ಮಾಡಿ ಬಿಸ್ಮಿಲ್ಲಾ ನದಾಫ್ ಪ್ರಾಣವನ್ನೇ ತೆಗೆದಿದ್ದಾನೆ. ಡಯಾಲಿಸಿಸ್ ವೇಳೆ ಆಸ್ಪತ್ರೆ ಬೆಡ್ ಮೇಲೆಯೇ ರೋಗಿ ಮೃತಪಟ್ಟಿದ್ದಾಳೆ'' ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ನಡುವೆ ತಾವು ಕುಡಿದಿರುವುದನ್ನು ಬಸವರಾಜ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಗರ್ಭಿಣಿ ಹೊಟ್ಟೆಯಲ್ಲೇ ಶಿಶು ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ - ಆಸ್ಪತ್ರೆ ಮುಂಭಾಗ ಪ್ರತಿಭಟನೆ
ಇನ್ನು ಆಸ್ಪತ್ರೆ ಎದುರು ಮೃತ ಮಹಿಳೆಯ ಶವವಿಟ್ಟು ಕುಟುಂಬಸ್ಥರು ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಶೆಯಲ್ಲೆ ಬಿಸ್ಮಿಲ್ಲಾಗೆ ಡಯಾಲಿಸಿಸ್ ಮಾಡಿದ ಬಸವರಾಜನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
''ಈ ಘಟನೆಗೆ ಆತನೇ ಹೊಣೆಗಾರ. ಆತನ ನಿರ್ಲಕ್ಷ್ಯದಿಂದ ಈ ದುರಂತ ನಡೆದಿದೆ. ಕೆಲಸದ ಅವಧಿಯಲ್ಲಿ ಮದ್ಯಪಾನ ಮಾಡಬಾರದು ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲ. ಸಿಬ್ಬಂದಿ ಕೊರತೆ ಇದೆ ಅನ್ನೋದು ಸುಳ್ಳು. ಕುಡಿದ ನಶೆಯಲ್ಲಿ ಸಿಬ್ಬಂದಿ ಕೊರತೆ ಇದ್ದಾರೆಂದು ಹೇಳಿರಬಹುದು. ಇಬ್ಬರು ಕ್ಲಾಸ್ ಡಿ, ಓರ್ವ ಸ್ಟಾಪ್ ನರ್ಸ್, ಮತ್ತೊಬ್ಬ ಲ್ಯಾಬ್ ಟೆಕ್ನಿಷಿಯನ್ ಇದ್ದಾರೆ. ಈ ನಾಲ್ವರು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರದದಲ್ಲಿ ಮೂರು ದಿನ ಅಥವಾ ಎರಡು ದಿನ ಕಿಡ್ನಿ ವೈಫಲ್ಯದ ರೋಗಿಗಳಿಗೆ ಡಯಾಲಿಸಿಸ್ ಮಾಡುತ್ತೇವೆ. ಇಂದು ಒಬ್ಬರ ಡಯಾಲಿಸಿಸ್ ಮಾಡಲಾಗುತ್ತಿತ್ತು. ಅದೇ ಸಮಯಕ್ಕೆ ಇವರು (ಮೃತ ಮಹಿಳೆ) ಬಂದಿದ್ದಾರೆ. ಇದೇ ವೇಳೆ ಆಸ್ಪತ್ರೆಯ ಸಿಬ್ಬಂದಿ ಕುಡಿದು ಬಂದಿದ್ದಾರೆಂದು ರೋಗಿಗಳಿಂದ ನನಗೆ ಫೋನ್ ಬಂದಿತು. ತಕ್ಷಣ ನಾವು ಸ್ಥಳಕ್ಕೆ ಬಂದೆವು.'' ಜಬ್ನಿಸಾ ಬೀಳಗಿ, ಜಿಲ್ಲಾ ಮಲೇರಿಯಾ ಆಫೀಸರ್