ವಿಜಯಪುರ : ಸುಮಾರು 2,500ಕ್ಕೂ ಹೆಚ್ಚು ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿ ಸದಸ್ಯರಿಗೆ ಏಕಕಾಲದಲ್ಲಿ ಜಿಲ್ಲಾಡಳಿತ ವಿಡಿಯೋ ಸಂವಾದದ ಮೂಲಕ ಕೊರೊನಾ ತಡೆ ಅರಿವು ಮೂಡಿಸಿತು.
ಜಿಲ್ಲೆಯ ಸರ್ಕಾರಿ ನುರಿತ ತಜ್ಞ ವೈದ್ಯರು, ಖಾಸಗಿ ತಜ್ಞ ವೈದ್ಯರು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿ ಸದಸ್ಯರಿಗೆ ಕೊರೊನಾ ತಡೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಕೋವಿಡ್ ರೋಗ ಲಕ್ಷಣ ಹೊಂದಿದವರನ್ನು ಪತ್ತೆ ಮಾಡಲು ಮಾರ್ಗದರ್ಶನ ಮಾಡಲಾಯಿತು.
ಈಗಾಗಲೇ ಪ್ರತಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ಸಮಿತಿಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಂತೆ ಪ್ರತಿ ಗ್ರಾಮ ಮಟ್ಟದಲ್ಲಿ 10 ಸದಸ್ಯರನ್ನ ಒಳಗೊಂಡ ಯುವಕರ ಸಂಘಗಳನ್ನು ರಚಿಸಿ ಕೊರೊನಾ ಮುನ್ನೆಚ್ಚರಿಕೆ ಕುರಿತು ಅರಿವು ಮೂಡಿಸಬೇಕು. ಈ ರೋಗ ಲಕ್ಷಣ ಕಂಡು ಬಂದವರನ್ನು ತಕ್ಷಣ ಪತ್ತೆ ಹಚ್ಚಿ ಆಯಾ ಆರ್‌ಎಂಪಿ ವೈದ್ಯರೊಂದಿಗೆ ಸಂಪರ್ಕ ಸಾಧಿಸುವಂತೆ ಸಂವಾದದ ಮೂಲಕ ನಿರ್ದೇಶನ ನೀಡಲಾಯಿತು.
ಈ ಸಂದರ್ಭದಲ್ಲಿ ನೇರ ಸಂವಾದ ನಡೆಸಿದ ಡಾ. ಲಕ್ಕಣ್ಣನವರ್, ಜಿಲ್ಲೆಯಲ್ಲಿ ತೀವ್ರವಾಗಿ ಹರಡುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದ ತಕ್ಷಣ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಿಗೆ ಸಂಪರ್ಕಿಸಿ ರೋಗಿಗಳನ್ನು ದಾಖಲಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ 300 ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸಿದ್ದು, 12 ಬೆಡ್‌ಗಳು ಐಸಿಯು ಮತ್ತು 80 ಕ್ಕೂ ಹೆಚ್ಚು ಬೆಡ್‌ಗಳನ್ನು ಆಕ್ಸಿಜನ್ ಬೆಡ್‌ಗಳಾಗಿ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗರ್ಭಿಣಿಯರಿಗೆ ಸಲಹೆ :ಗರ್ಭಿಣಿಯರು ಕಡ್ಡಾಯವಾಗಿ ಲಿಂಬೆರಸ, ವಿಟಾಮಿನ್ ಸಿ ಮಾತ್ರೆ, ಜಿಂಕ್ ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಕೋವಿಡ್ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರನ್ನ ಸಂಪರ್ಕಿಸಬೇಕು ಎಂದು ಸಭೆಯಲ್ಲಿ ತಜ್ಞರು ಸಲಹೆ ನೀಡಿದರು.
ಬಳಿಕ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ಎಲ್ಲ ನಾಗರಿಕರು ನಿರ್ಲಕ್ಷ್ಯವಹಿಸದೇ, ಅನಾವಶ್ಯಕವಾಗಿ ಓಡಾಡದೇ ಎಚ್ಚರಿಕೆ ವಹಿಸಬೇಕು. ಪ್ರತಿ ಗ್ರಾಮವಾರು ರಚಿಸಲಾದ ಕಾರ್ಯಪಡೆ ತಂಡಗಳು ರಚಿಸಲಾಗುವ ಯುವ ತಂಡಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಕೋವಿಡ್ ಲಕ್ಷಣ ಇದ್ದವರನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಗೆ ಒಳಪಡಿಸುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಶರಣು ಕಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.