ಮುದ್ದೇಬಿಹಾಳ: ಚಂದ್ರ ಗ್ರಹಣದ ಕುರಿತ ಮೂಢ ನಂಬಿಕೆಗಳನ್ನು ದೂರ ಮಾಡುವ ಸಲುವಾಗಿ ತಾಲೂಕಿನ ನಾಲತವಾಡದ ಕೆಲ ಯುವಕರು ಸ್ಮಶಾನದಲ್ಲಿ ಊಟ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ನಾಲತವಾಡ ಪಟ್ಟಣದ ಪೊಲೀಸ್ ಠಾಣೆಯ ಹಿಂಬದಿಯ ರುದ್ರಭೂಮಿಯಲ್ಲಿ ಒಂಭತ್ತು ಜನ ಯುವಕರ ತಂಡ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸಿದರು. ಈ ಕುರಿತು ಮಾತನಾಡಿದ ಯುವಕ ಮಾರುತಿ ಸಿದ್ದಾಪೂರ, ಗ್ರಹಣದ ಸಂದರ್ಭದಲ್ಲಿ ಅದು ಮಾಡಬಾರದು, ಇದು ಮಾಡಬಾರದು ಎಂಬ ಕಟ್ಟಳೆಗಳನ್ನು ಹಾಕುತ್ತಿರುತ್ತಾರೆ. ಅಂತವರಿಗೆ ನಾವು ಸ್ಮಶಾನದಲ್ಲಿ ಊಟ ಮಾಡುವ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದರು.
ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಇರುವಂತೆ ಮುದ್ದೇಬಿಹಾಳ ತಾಲೂಕಿನಲ್ಲಿಯೂ ಚಂದ್ರ ಗ್ರಹಣದ ಸಮಯದಲ್ಲಿ ಯಾರೂ ಮನೆಯಿಂದ ಹೊರಬರಬಾರದು, ಗರ್ಭಿಣಿಯರಿಗೆ ಗ್ರಹಣದಿಂದ ಅಪಾಯವಿದೆ, ಊಟ ಮಾಡಬಾರದು ಎಂಬ ನಂಬಿಕೆಗಳಿವೆ. ಇದನ್ನು ಹೋಗಲಾಡಿಸುವ ಪ್ರಯತ್ನವನ್ನು ಯುವಕರ ತಂಡ ಮಾಡಿದೆ.
ಈ ಸುದ್ದಿಯನ್ನೂ ಓದಿ: ಕುಕ್ಕರ್ ಮೂಲಕ ಸ್ಟ್ರೀಮಿಂಗ್ ವ್ಯವಸ್ಥೆ... ಗ್ರಾಮದಲ್ಲಿ ಕಡಿಮೆಯಾಯ್ತು ಕೊರೊನಾ ಪಾಸಿಟಿವ್ ಕೇಸ್!
ಜಾಗೃತಿ ಮೂಡಿಸಿದ ಯುವಕರ ತಂಡದಲ್ಲಿ ಮಂಜುನಾಥ ಕಟ್ಟಿಮನಿ, ರಾಜು ಮಸಿಬಿನಾಳ, ಬಸು ಸಿದ್ದಾಪೂರ, ಲಕ್ಷ್ಮಣ ಚಲವಾದಿ, ಪ್ರದೀಪ್ ಸಿದ್ದಾಪೂರ, ಅಯ್ಯಪ್ಪ ಸಿದ್ದಾಪೂರ, ಅಭಿಷೇಕ್ ಸಿದ್ದಾಪೂರ, ರಂಜಿತ್ ಮಸಿಬಿನಾಳ ಮೊದಲಾದವರು ಇದ್ದರು.
ಕಳೆದ ರಾತ್ರಿ ಗೋಚರವಾದ ವರ್ಷದ ಮೊದಲ ಚಂದ್ರಗ್ರಹಣ
2021 ರ ಮೊದಲ ಚಂದ್ರ ಗ್ರಹಣ ನಿನ್ನೆ (ಬುಧವಾರ) ಭಾರತೀಯ ಕಾಲಮಾನ ಸಂಜೆ 3:15 ರ ಹೊತ್ತಿಗೆ ಪ್ರಾರಂಭವಾಗಿ ಸಂಜೆ 6 : 22 ರ ಹೊತ್ತಿಗೆ ಕೊನೆಗೊಂಡಿದೆ. ಭಾರತಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಂಡಮಾನ್ ದ್ವೀಪಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಿರುವ ಮಾಹಿತಿಯಿದೆ.