ವಿಜಯಪುರ: ಸಿಂದಗಿ ಪಟ್ಟಣದ ಹೊರವಲಯದ ಡಾಬಾದಲ್ಲಿ ಬಿಜೆಪಿ ಮುಖಂಡನ ಮೇಲೆ ದುಷ್ಕರ್ಮಿಗಳ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಸಿಂದಗಿ ತಾಲೂಕು ಬಿಜೆಪಿ ಮಂಡಲದ ಒಬಿಸಿ ಘಟಕದ ಅಧ್ಯಕ್ಷ ರವಿಕಾಂತ ನಾಯ್ಕೋಡಿ ರಾತ್ರಿ ತನ್ನ ಸ್ನೇಹಿತರ ಜೊತೆ ಆಲಮೇಲ ರಸ್ತೆಯ ಡಾಬಾದಲ್ಲಿ ಊಟಕ್ಕೆ ಬಂದಿದ್ದರಂತೆ. ಈ ವೇಳೆ ದುಷ್ಕರ್ಮಿಗಳು ನಾಯ್ಕೋಡಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ಘಟನೆ ತಡೆಯಲು ಹೋದ ಆತನ ಸ್ನೇಹಿತರ ಮೇಲೂ ದಾಳಿ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ರವಿಕಾಂತ ನಾಯ್ಕೋಡಿಗೆ ಗಾಯಗಳಾಗಿವೆ. ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾದ ರವಿಕಾಂತ ನಾಯ್ಕೋಡಿ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾದ ಅನೀಲ ಬರಗಾಲ ಇಬ್ಬರು ಸಹ ಸಿಂದಗಿ ತಾಲೂಕಿನ ಬಬಲೇಶ್ವರ ಗ್ರಾಮದವರು. ಹಣಕಾಸಿನ ವಿಚಾರವಾಗಿ ಈ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ರಾತ್ರಿ ಅನೀಲ ಬರಗಾಲ ಹಾಗೂ ಯುವರಾಜ ಸೇರಿದಂತೆ ನಾಲ್ಕೈದು ಜನ ಡಾಬಾಗೆ ನುಗ್ಗಿ ದಾಳಿ ನಡೆಸಿದ್ದಾರೆ ಎಂದು ಗಾಯಗೊಂಡಿರುವ ರವಿಕಾಂತ ನಾಯ್ಕೋಡಿ ನೀಡಿರುವ ದೂರಿನ ಮೇರೆಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿ ಕ್ಯಾಮರಾ ದೃಶ್ಯ: ಡಾಬಾದಲ್ಲಿ ಹಲ್ಲೆ ನಡೆಯುವ ಮುನ್ನ ಬರುವ ವ್ಯಕ್ತಿಗಳ ಚಲನವಲನ ಹಾಗೂ ರವಿಕಾಂತನನ್ನು ಅಟ್ಟಾಡಿಸಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.