ವಿಜಯಪುರ: ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಎಟಿಎಂ ಸೆಕ್ಯುರಿಟಿ ಗಾರ್ಡ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಕೊನೆಗೂ ಸಿಂದಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸಿಂದಗಿ ತಾಲೂಕಿನ ಬಬಲೇಶ್ವರ ಗ್ರಾಮದ ಕಾರು ಚಾಲಕ ಅನೀಲ್ ಜೆಟ್ಟೆಪ್ಪ ಹೊಸಮನಿ, ದಯಾನಂದ ಸಿದ್ದಪ್ಪ ಹೊಸಮನಿ ಹಾಗೂ ಓರ್ವ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಸಿಂದಗಿ ಪಟ್ಟಣದ ಐಸಿಐಸಿಐ ಬ್ಯಾಂಕ್ನಲ್ಲಿ ಆಗಸ್ಟ್ 25ರ ರಾತ್ರಿ ಎಟಿಎಂ ದರೋಡೆಗೆ ಯತ್ನ ನಡೆದಿತ್ತು. ದರೋಡೆ ವೇಳೆ ಅಲ್ಲೇ ಮಲಗಿದ್ದ ಬ್ಯಾಂಕ್ ಕಾವಲುಗಾರ ಮದಭಾವಿ ಗ್ರಾಮದ ರಾಹುಲ್ ರಾಠೋಡ ಎಂಬುವವರನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆದರೆ ಎಟಿಎಂ ಯಂತ್ರ ತೆರೆಯಲಾಗದೆ ದರೋಡೆಕೋರರು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದರು.
ಈ ಘಟನೆ ಸಿಂದಗಿ ಪಟ್ಟಣದಲ್ಲಿ ಸಂಚಲನ ಮೂಡಿಸಿತ್ತು. ಬ್ಯಾಂಕ್ ಬಳಿ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸಹ ಆರೋಪಿಗಳು ಅಸ್ಪಷ್ಟವಾಗಿ ಕಂಡಿದ್ದರು. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಮೊದಲು ಇದೊಂದು ಅಂತರ್ ರಾಜ್ಯ ವೃತ್ತಿಪರ ಗ್ಯಾಂಗ್ನ ಕೃತ್ಯ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ಆದರೆ ತನಿಖೆ ನಡೆಸಿದಾಗ ಈ ಕೆಲಸ ಸ್ಥಳೀಯರದ್ದೇ ಎಂಬ ಮಾಹಿತಿ ದೊರೆತಿತ್ತು. ಕುಡಿಯಲು ಹಣ ಇಲ್ಲದಿದ್ದಾಗ ಆರೋಪಿಗಳು ಎಟಿಎಂ ದರೋಡೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.
ಸತತ ಒಂದೂವರೆ ತಿಂಗಳಿಂದ ಆರೋಪಿಗಳ ಪತ್ತೆಗೆ ಬೀಸಿದ್ದ ಜಾಲದಲ್ಲಿ ಕೊನೆಗೂ ಸಿಕ್ಕಿ ಹಾಕಿಕೊಂಡು ದರ್ಗಾ ಜೈಲು ಪಾಲಾಗಿದ್ದಾರೆ.