ವಿಜಯಪುರ: ಮುಂಬೈನಿಂದ ಗದಗಕ್ಕೆ ತೆರಳುವ ಗದಗ ಎಕ್ಸ್ಪ್ರೆಸ್ ರೈಲು ಜಿಲ್ಲೆಗೆ ಇಂದು ಬೆಳಗ್ಗೆ ಆಗಮಿಸಿದ್ದು, ಮಹಾರಾಷ್ಟ್ರದಿಂದ 107 ವಲಸೆ ಕಾರ್ಮಿಕರು ಆಗಮಿಸಿದ್ದಾರೆ.
ಮಹಾರಾಷ್ಟ್ರಕ್ಕೆ ಉದ್ಯೋಗ ಅರಸಿ ಹೋಗಿದ್ದವರು ಇಂದು ವಾಪಸ್ ಬಂದಿದ್ದಾರೆ. ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ನಗರದ ಹೊರ ಭಾಗದಲ್ಲಿನ ವಸತಿ ನಿಲಯ ಹಾಗೂ ತಾಲೂಕು ಕೇಂದ್ರಗಳಲ್ಲಿನ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಮುಂಬೈನಿಂದ ಗದಗಕ್ಕೆ ಬರುವ ರೈಲು ಇದಾಗಿದ್ದು, ಮೊದಲ ದಿನ 212, ಎರಡನೇ ದಿನ 147 ಕಾರ್ಮಿಕರು ನಗರಕ್ಕೆ ಆಗಮಿಸಿದ್ದಾರೆ.
ಇಂದು ಮೂರನೇ ದಿನ 107 ಕಾರ್ಮಿಕರು ರೈಲಿನ ಮೂಲಕ ವಿಜಯಪುರಕ್ಕೆ ಆಗಮಿಸಿದ್ದಾರೆ. ಅವರನ್ನು ರೈಲು ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಿ ಆಯಾ ತಾಲೂಕು ಕೇಂದ್ರಗಳ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಯಿತು.