ಮುದ್ದೇಬಿಹಾಳ(ವಿಜಯಪುರ): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರ ವಿವಿಧ ಬೇಡಿಕೆ ಈಡೇರಿಸುವ ಕುರಿತು ಡಿಸಿಎಂ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚಿಸಬೇಕು. ಜೊತೆಗೆ ಮುಂಬರುವ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ, ನ್ಯಾಯ ಒದಗಿಸಲು ಮುಂದಾಗಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ನಡಹಳ್ಳಿ ಅವರನ್ನು ಬೆಂಗಳೂರಿನ ಆಹಾರ ನಿಗಮದ ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿದ ಪದಾಧಿಕಾರಿಗಳು, ನಡಹಳ್ಳಿ ಅವರು ಉತ್ತರ ಕರ್ನಾಟಕದ ನೌಕರರ ಸಮಸ್ಯೆಗಳೇನು ಎನ್ನುವುದನ್ನು ಬಲ್ಲವರಾಗಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ನಡಹಳ್ಳಿಯವರು ತಮ್ಮ ಪರ ನಿಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ನಡಹಳ್ಳಿಯವರು, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸಾರಿಗೆ ನೌಕರರ ವಿವಿಧ ಬೇಡಿಕೆ ಈಡೇರಿಸುವ ಕುರಿತು ಸಾರಿಗೆ ಸಚಿವರ ಜೊತೆ ಚರ್ಚಿಸಿ, ಸರ್ಕಾರದ ಮೂಲಕ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.
ಸಾರಿಗೆ ನೌಕರರ ಬೇಡಿಕೆಗಳು:
- ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ನೌಕರರಿಗೆ 1-1-2020ರಿಂದ ಆಗಬೇಕಿರುವ ವೇತನ ಪರಿಷ್ಕರಣೆ ಜಾರಿಗೊಳಿಸಬೇಕು.
- ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುವ ವರ್ಗಾವಣೆ ನೀತಿಯನ್ನು ಸಾರಿಗೆ ಸಂಸ್ಥೆಯಲ್ಲೂ ಜಾರಿಗೊಳಿಸಬೇಕು.
- ಸಾರಿಗೆ ನೌಕರರು ಮತ್ತು ಅವರ ಕುಟುಂಬ ವರ್ಗದವರಿಗೆ ಆರೋಗ್ಯ ವಿಮೆ ಜಾರಿಗೊಳಿಸಬೇಕು.
- ಪೊಲೀಸ್ ಇಲಾಖೆಯವರಿಗೆ ಒದಗಿಸಿದಂತೆ ದಿನಸಿ ಪದಾರ್ಥ, ಕ್ಯಾಂಟೀನ್ ಸೌಲಭ್ಯ ಒದಗಿಸಬೇಕು.
- ಕೋವಿಡ್ ಮಹಾಮಾರಿಗೆ ತುತ್ತಾದ ನೌಕರರಿಗೆ ಸರ್ಕಾರ ಘೋಷಿಸಿರುವ 30 ಲಕ್ಷ ಪರಿಹಾರ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು.
- ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರಿಗೆ ನೌಕರರ ವೇತನದಲ್ಲಿ ತುಂಬಾ ವ್ಯತ್ಯಾಸವಿದ್ದು, ಜಾರಿಯಾಗಲಿರುವ ವೇತನ ಒಪ್ಪಂದದಲ್ಲಿ ಇದನ್ನು ಸರಿಪಡಿಸಬೇಕು.