ವಿಜಯಪುರ: ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ವರದಿಗೆ ಹೋದ ಖಾಸಗಿ ಸುದ್ದಿ ವಾಹಿನಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ, ಹಲ್ಲೆಕೋರರ ಮೇಲೆ ಕ್ರಮ ಕೈಗೊಳ್ಳಬೇಕಾಗಿ ಕಾರ್ಯನಿರತ ಪತ್ರಕರ್ತರ ಸಂಘಟನೆಯ ಪತ್ರಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೊರೊನಾ ಭೀತಿಯ ನಡುವೆ ಪತ್ರಕರ್ತರು ಜೀವದ ಹಂಗು ತೊರೆದು ಕಾರ್ಯವಹಿಸುತ್ತಿದ್ದಾರೆ. ನಿನ್ನೆ ನಡೆದ ಗಲಭೆಯ ವರದಿಗೆ ಹೋದ ಪತ್ರಕರ್ತರ ಮೇಲೆ ಪುಂಡರು ಹಲ್ಲೆಗೆ ಮುಂದಾಗಿದ್ದಾರೆ. ಪತ್ರಕರ್ತರ ಕ್ಯಾಮರಾ, ವಾಹನ ಒಡೆದು ಹಾಕಿದ್ದಾರೆ. ರಾಜ್ಯದಲ್ಲಿ ವರದಿಗಾರರ ಮೇಲೆ ಹಲವು ಬಾರಿ ಹಲ್ಲೆ, ಜೀವ ಬೆದರಿಕೆ ನಡೆಯುತ್ತಿದ್ದು, ಸರ್ಕಾರ ಪತ್ರಕರ್ತರ ರಕ್ಷಣೆಗೆ ಮುಂದಾಗಬೇಕು. ಜೊತೆಗೆ ಹಲ್ಲೆಗೆ ಮುಂದಾದ ಹಲ್ಲೆಕೋರರ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗೆ ಪತ್ರಕರ್ತರು ಮನವಿ ಮಾಡಿಕೊಂಡಿದ್ದು, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.