ವಿಜಯಪುರ: ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಕೊಲೆ ಯತ್ನ ಹಾಗೂ ಆತನ ಅಂಗರಕ್ಷಕ, ಕಾರು ಚಾಲಕನ ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಮುರುಗೇಶ ಸುಭಾಸ ಉಳ್ಳಾಗಡ್ಡಿ ಬಂಧಿತ ಆರೋಪಿ. ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನವೆಂಬರ್ 2ರಂದು ವಿಜಯಪುರ ಹೊರವಲಯದ ಕನ್ನಾಳ ಕ್ರಾಸ್ ಬಳಿ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಆತನ ಬೆಂಬಲಿಗರನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ: ಭೀಮಾ ತೀರದ ಶೂಟೌಟ್: ಪ್ರಕರಣದ ಮಾಸ್ಟರ್ ಮೈಂಡ್ ಅಂದರ್
ಇದರಲ್ಲಿ ಸದ್ಯ ಮಹಾದೇವ ಸಾಹುಕಾರ ಭೈರಗೊಂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈತನ ಇಬ್ಬರು ಬೆಂಬಲಿಗರು ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 31 ಜನರನ್ನು ಬಂಧಿಸಲಾಗಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.