ಮುದ್ದೇಬಿಹಾಳ (ವಿಜಯಪುರ): ಬಸ್ ನಿಲ್ಲಿಸಲಿಲ್ಲ ಎಂದು ಆಕ್ರೋಶಗೊಂಡ ಕೆಲ ವಿದ್ಯಾರ್ಥಿಗಳು ಸರ್ಕಾರಿ ಬಸ್‌ಗೆ ಕಲ್ಲೆಸೆದು ಗಾಜು ಪುಡಿಗೈದಿರುವ ಘಟನೆ ತಾಲೂಕಿನ ಚಲಮಿ ತಾಂಡಾದ ಬಳಿ ಗುರುವಾರ ನಡೆದಿದೆ.
ಘಟನೆ ಬಳಿಕ ಪ್ರಯಾಣಿಕರನ್ನು ಕೆಳಗಿಳಿಸಿ, ಇಲ್ಲಿನ ಪೊಲೀಸ್ ಠಾಣೆಗೆ ಬಸ್ ತರಲಾಯಿತು. ಘಟಕದ ಎಟಿಎಸ್ ಬಿ.ಆರ್.ಬಾಗವಾನ, ಚಾಲಕ ನಾಗಪ್ಪ ಮಾರಲದಿನ್ನಿ, ಮಹಾಂತೇಶ ಕಟ್ಟೀಮನಿ ಘಟನೆಯ ಕುರಿತು ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡರು. ಅಲ್ಲದೇ ಬಸ್‌ಗೆ ಕಲ್ಲೆಸೆದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ನಿತ್ಯ ಬೆಳಗ್ಗೆ 8 ಗಂಟೆಯಿಂದ ಕಾಳಗಿ, ಹುಲ್ಲೂರ, ಹುಲ್ಲೂರ ತಾಂಡಾ, ಜಟ್ಟಗಿ ಕ್ರಾಸ್ ಮೂಲಕ ಮುದ್ದೇಬಿಹಾಳಕ್ಕೆ ಬಸ್ ಬರುತ್ತದೆ. ಜಟ್ಟಗಿ ಕ್ರಾಸ್ ತಲುಪುತ್ತಲೇ ಬಸ್ ಭರ್ತಿಯಾಗಿರುತ್ತದೆ. ಗುರುವಾರ ಕೂಡ 99 ಪಾಸ್, ಎಂಟು ಪ್ರಯಾಣಿಕರು ಇದ್ದರು. ಬಸ್‌ನಲ್ಲಿ ನಿಲ್ಲಲೂ ಜಾಗವಿರಲಿಲ್ಲ. ಚಲಮಿ ತಾಂಡಾದ ಬಳಿ ಬರುತ್ತಲೇ 20ರಿಂದ 25 ವಿದ್ಯಾರ್ಥಿಗಳು ಬಸ್ ನಿಲುಗಡೆಗೆ ಮುಂದಾದರು.
ಆದರೆ, ನಾವು ಬಸ್‌ನಲ್ಲಿಯೇ ನಿಲ್ಲುವುದಕ್ಕೆ ಜಾಗ ಇಲ್ಲದ ಕಾರಣ ನಿಲುಗಡೆ ಮಾಡದೇ ಹಾಗೆ ಬಂದಿದ್ದೇವೆ. ಅಷ್ಟರಲ್ಲಾಗಲೇ ಕೆಲವು ಕಿಡಿಗೇಡಿ ವಿದ್ಯಾರ್ಥಿಗಳು ಬಸ್ ಹಿಂಬದಿಗೆ ಕಲ್ಲು ಎಸೆದಿದ್ದಾರೆ ಎಂದು ಬಸ್ನ ಸಿಬ್ಬಂದಿ ಮಾಹಿತಿ ನೀಡಿದರು.
ಗಾಜು ಒಡೆದಿದ್ದು ಒಳಗಿದ್ದವರಿಗೆ ಸ್ವಲ್ಪದರಲ್ಲಿಯೇ ಬಡಿಯುವುದರಿಂದ ತಪ್ಪಿದೆ. ಕೂಡಲೇ ಸ್ವಲ್ಪ ದೂರದಲ್ಲಿ ಬಸ್ ನಿಲುಗಡೆ ಮಾಡಿ ಕಲ್ಲೆಸೆದವರ ಮಾಹಿತಿ ತಿಳಿಯಲು ಮುಂದಾಗಿದ್ದು, ಕೆಲವು ವಿದ್ಯಾರ್ಥಿಗಳ ಮೇಲೆ ಪೊಲೀಸರ ಬಳಿ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಈಶ್ವರಪ್ಪ, ಮುತಾಲಿಕ್ ಭಾರತದ ತಾಲಿಬಾನಿಗಳು: ಆರ್. ಧ್ರುವನಾರಾಯಣ ಗರಂ
ಎಟಿಎಸ್ ಬಿ.ಆರ್.ಬಾಗವಾನ ಮಾತನಾಡಿ, ರೈಲ್ವೆ ಸ್ಟೇಷನ್‌ದಿಂದ ಬಸ್ ಬರುತ್ತದೆ. ಆದರೆ ಇಲ್ಲಿಯ ಹುಡುಗರು ಇದೇ ಬಸ್‌ಗೆ ಹತ್ತಲು ಬಯಸುತ್ತಾರೆ. ಹಿಂದಿನ ಖಾಲಿ ಇರುವ ಬಸ್‌ಗಳಿಗೆ ಹತ್ತುವುದಿಲ್ಲ. ಬಾಗಲಕೋಟದಿಂದ ಮುದ್ದೇಬಿಹಾಳ ಕಡೆಗೆ ಬರುವ ಬಸ್‌ಗಳ ನಿಲುಗಡೆ ಇದ್ದರೂ ವಿದ್ಯಾರ್ಥಿಗಳು ಅದರಲ್ಲಿ ಹತ್ತುವುದಿಲ್ಲ.
ಇದೇ ಬಸ್‌ಗಾಗಿ ಕಾಯುತ್ತಾರೆ. ಅಲ್ಲದೇ ಒಂದು ಬಸ್ ಕೂಡ ಹೆಚ್ಚುವರಿಯಾಗಿ ಈ ಮಾರ್ಗದಲ್ಲಿ ಓಡಿಸುತ್ತಿದ್ದರೂ ವಿದ್ಯಾರ್ಥಿಗಳು ಇದರಲ್ಲಿ ಹತ್ತುವುದಿಲ್ಲ ಎಂದು ಹೇಳಿದರು. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿ ವಿದ್ಯಾರ್ಥಿಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.