ಮುದ್ದೇಬಿಹಾಳ(ವಿಜಯಪುರ): ಅಂಗನವಾಡಿಯಿಂದ ಹಾಲಿನ ಪ್ಯಾಕೇಟ್ ಕದ್ದೊಯ್ಯುತ್ತಿದ್ದ ಕಾರ್ಯಕರ್ತೆಯೊಬ್ಬಳನ್ನು ಗ್ರಾಮಸ್ಥರು ರೆಡ್‌ಹ್ಯಾಂಡ್ ಆಗಿ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಲೊಟಗೇರಿ ಗ್ರಾಮದಲ್ಲಿ ನಡೆದಿದೆ.
ಲೊಟಗೇರಿ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀಬಾಯಿ ನಾಯ್ಕಲ್ ಎಂಬ ಮಹಿಳೆ 8 ಹಾಲಿನ ಪುಡಿಯ ಪ್ಯಾಕೇಟ್ ಕದ್ದು ಒಯ್ಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಿಡಿದು ತಪಾಸಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ಬಿಟ್ಟು ಬಿಡುವಂತೆ ಕಾರ್ಯಕರ್ತೆ ಗ್ರಾಮಸ್ಥರನ್ನು ಪರಿಪರಿಯಾಗಿ ಕೇಳಿದ್ದಾಳೆ. ಅಲ್ಲದೇ ರಾಜಕೀಯ ನಾಯಕರೊಬ್ಬರ ಗಮನಕ್ಕೆ ತರುವುದಾಗಿ ಹೇಳಿದಾಗ ಹಾಲಿನ ಪ್ಯಾಕೇಟ್‌ಗಳನ್ನು ಅಲ್ಲಿಯೇ ಬಿಟ್ಟು ವಾಪಸ್ ತೆರಳಿದ್ದಾಳೆ.
ಈ ಕುರಿತು ಮಾತನಾಡಿರುವ ಗ್ರಾಮಸ್ಥರಾದ ಬಾಪುಗೌಡ ಪಾಟೀಲ, ದುರಗಪ್ಪ ಮಾದರ ಅವರು, ಹಲವು ಬಾರಿ ಇದೇ ರೀತಿ ಕೃತ್ಯವೆಸಗಿ ಸಿಕ್ಕಿಬಿದ್ದಾಗ ಕ್ಷಮೆಯಾಚಿಸಿ ಮುಂದೆ ತಪ್ಪು ನಡೆಯದಂತೆ ನೋಡಿಕೊಳ್ಳುವುದಾಗಿ ಹೇಳುತ್ತಿದ್ದರಿಂದ ಗ್ರಾಮಸ್ಥರೆಲ್ಲರೂ ಸೇರಿ ಈ ವಿಷಯವನ್ನು ಕೈಬಿಟ್ಟಿದ್ದರು. ಇದೀಗ ಮತ್ತೆ ಹಾಲಿನ ಪ್ಯಾಕೇಟ್ ಕದ್ದೊಯ್ಯುವಾಗ ಸಿಕ್ಕು ಬಿದ್ದಿದ್ದಾಳೆ.
ಕೂಡಲೇ ಅಧಿಕಾರಿಗಳು ಈ ಅಂಗನವಾಡಿ ಕಾರ್ಯಕರ್ತೆ ವಿರುದ್ಧ ಕ್ರಮ ಜರುಗಿಸಬೇಕು, ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.