ವಿಜಯಪುರ : ಮಣ್ಣು ರೈತರ ಬಾಳಿನ ಕಣ್ಣು. ಇದನ್ನು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ಉದ್ದೇಶದಿಂದ ಆಂಧ್ರ ಪ್ರದೇಶದ ಯುವಕನೊಬ್ಬ ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆ ಕೈಗೊಂಡಿದ್ದಾನೆ.
ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿಗೆ ಪಾದಯಾತ್ರೆ : ಮೂಲತಃ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೈಡೇಟಿ ಗ್ರಾಮದ 27ವರ್ಷದ ಯುವಕ ಸಿಕೊಂದು ಪವನಕುಮಾರ ಈ ಸಾಹಸಕ್ಕೆ ಕೈ ಹಾಕಿದ್ದಾನೆ. ಈತ ಮೂಲತಃ ಕೃಷಿ ಕುಟುಂಬದಿಂದ ಬಂದಿದ್ದು, ಇತ ಏರಲೈನ್ಸ್ ಟೂರಿಸಂ ಮತ್ತು ಹಾಸ್ಪಿಟಾಲಿಟಿ (ಎಟಿಎಚ್) ಕೋರ್ಸ್ ನಲ್ಲಿ ಬಿಎಸ್ ಸಿ ಪದವೀಧರನಾಗಿದ್ದಾನೆ. ಕೆಲ ವರ್ಷಗಳ ಕಾಲ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿದ್ದಾನೆ. ನಂತರ ಪೋಷಕರ ಒತ್ತಾಯದ ಮೇರೆಗೆ ಸ್ವಗ್ರಾಮಕ್ಕೆ ಬಂದು ತಂದೆ ಜತೆ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ, ಉತ್ತಮ ಇಳುವರಿಗೆ ಮಣ್ಣಿಗೆ ಎಷ್ಟು ಮಹತ್ವ ಇದೆ. ಫಲವತ್ತಾದ ಮಣ್ಣಿನಿಂದ ಉತ್ತಮ ಇಳುವರಿ ಪಡೆಯಬಹುದು ಎಂಬುದನ್ನು ಕಂಡು ಕೊಂಡಿದ್ದಾರೆ.
ಮಣ್ಣು ಉಳಿಸಿ : ಇನ್ನು ಮಣ್ಣಿನ ಮಹತ್ವವನ್ನು ದೇಶದ ಜನರಿಗೆ ತಿಳಿಸುವ ಉದ್ದೇಶದಿಂದ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ. ಕಳೆದ 2022 ಆಗಸ್ಟ್ 17ರಂದು ಜಮ್ಮುವಿನಿಂದ ಪವನಕುಮಾರ ಪಾದಯಾತ್ರೆ ಆರಂಭಿಸಿದ್ದಾರೆ. ಈ ವರೆಗೂ ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳನ್ನು ಸುತ್ತಿ 149 ದಿನಗಳ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಸದ್ಯ ಮಹಾರಾಷ್ಟ್ರದಿಂದ ಧೂಳಖೇಡ ಮೂಲಕ ಕರ್ನಾಟಕ ಪ್ರವೇಶಿಸಿದ್ದು, ನಿಡಗುಂದಿಗೆ ತಲುಪಿದ್ದರು. ಇದಕ್ಕೂ ಮೊದಲು ಗೊಳಸಂಗಿಯ ವಿಠ್ಠಲ - ರುಕ್ಮಿಣಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.
ಇಲ್ಲಿ ಗ್ರಾಮಸ್ಥರ ಜತೆ ಸಭೆ ನಡೆಸಿ ಮಣ್ಣಿನ ಮಹತ್ವದ ಕುರಿತು ಅಪರೂಪದ ಮಾಹಿತಿ ಹಂಚಿಕೊಂಡರು. ಬುಧವಾರ ಮತ್ತೆ ಪಾದಯಾತ್ರೆ ಆರಂಭಿಸಿ ನಿಡಗುಂದಿ ಮೂಲಕ ಪಾದಯಾತ್ರೆ ಮತ್ತೆ ಮುಂದುವರೆಸಿದ್ದಾರೆ. ಯುವಕನ ಪಾದಯಾತ್ರೆ ಕನ್ಯಾಕುಮಾರಿ ತಲುಪಲು ಇನ್ನೂ ಕನಿಷ್ಠ 50 ದಿನಗಳಾದರೂ ಬೇಕಾಗುತ್ತದೆ.
149 ದಿನಗಳ ಯಾತ್ರೆ ಮುಗಿಸಿರುವ ಯುವಕ : ಇನ್ನು ಪವನಕುಮಾರ್ ಅವರು ನಿತ್ಯ 20-25 ಕಿಮೀ ಪಾದ ಯಾತ್ರೆ ನಡೆಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆಯವರೆಗೆ ಪಾದಯಾತ್ರೆ ನಡೆಸುವ ಇವರು ಸಂಜೆ ವೇಳೆ ಸಿಗುವ ಗ್ರಾಮದ ದೇವಾಲಯದಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ರಾತ್ರಿ ಊಟದ ವ್ಯವಸ್ಥೆ ಮಾಡುತ್ತಾರೆ. ಬಳಿಕ ಅಲ್ಲೇ ಉಳಿದುಕೊಂಡು, ಮರುದಿನ ಬೆಳಗ್ಗೆ ನಿತ್ಯ ಕರ್ಮ ಮುಗಿಸಿಕೊಂಡು ಮತ್ತೆ ಪ್ರಯಾಣ ಆರಂಭಿಸುತ್ತಾರೆ. ಇಂದು ಹುನಗುಂದದಲ್ಲಿ ವಾಸ್ತವ್ಯ ಮಾಡಿ ಮತ್ತೆ ಕನ್ಯಾಕುಮಾರಿಗೆ ಪಾದಯಾತ್ರೆ ಆರಂಭಿಸಲಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಪವನಕುಮಾರ, ರಾಜಸ್ಥಾನದಲ್ಲಿ ಮಲಗಲು ಜಾಗವಿಲ್ಲದೇ ಪರದಾಡುವಂತಾಯಿತು. ಅಲ್ಲಿನ ಗ್ರಾಮಸ್ಥರು ನನ್ನನ್ನು ವಾಸ್ತವ್ಯ ಮಾಡಲು ಬಿಡಲಿಲ್ಲ. ಇದರಿಂದ ಸ್ವಲ್ಪ ತೊಂದರೆಯಾಯಿತು. ಅಂದಿನಿಂದ ನಾನು ಹೋಗುವ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ನನ್ನ ಪಾದಯಾತ್ರೆ ಉದ್ದೇಶ ತಿಳಿಸಿ ಒಂದು ಪತ್ರ ಪಡೆಯುತ್ತಿದ್ದೇನೆ. ಕರ್ನಾಟಕದಲ್ಲಿ ಜನ ತುಂಬ ಸಹಕಾರ ನೀಡುತ್ತಿದ್ದಾರೆ ಎಂದರು.
1200 ಕಿಮೀ ಯಾತ್ರೆ ಬಾಕಿ : ಮುಂದಿನ 50 ದಿನಗಳಲ್ಲಿ ಉಳಿದ 1200 ಕಿಮೀ ಪಾದಯಾತ್ರೆ ಮುಗಿಸಿ ನನ್ನ ಸ್ವಗ್ರಾಮಕ್ಕೆ ತೆರಳಿ ಮತ್ತೆ ಕೃಷಿ ಇಲ್ಲವೇ ಖಾಸಗಿ ಉದ್ಯೋಗದಲ್ಲಿ ತೊಡಗುವುದಾಗಿ ಹೇಳಿದರು.
ಇದನ್ನೂ ಓದಿ : ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥನೆ.. ಜಮಖಂಡಿಯಿಂದ ದೆಹಲಿವರೆಗೆ ಯುವಕರ ಪಾದಯಾತ್ರೆ