ವಿಜಯಪುರ: ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಹಿನ್ನೆಲೆ ನಗರದ ವಿ.ಬಿ.ದರಬಾರ ವಿದ್ಯಾವರ್ಧಕ ಸಂಘ ಪ್ಲಾಸ್ಟಿಕ್ ಮುಕ್ತ ಅಭಿಯಾನದಡಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತ್ತು.
1 ಕೆಜಿ ಪ್ಲಾಸ್ಟಿಕ್ ನೀಡಿದರೆ ಒಂದು ಕೆಜಿ ಸಕ್ಕರೆ ನೀಡಿ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ನಡೆಸಿದರು. ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಹಾಗೂ ಕಾಲೋನಿಯಲ್ಲಿರುವ ಪ್ಲಾಸ್ಟಿಕ್ ಸಂಗ್ರಹಿಸಿ ಅಭಿಯಾನದಲ್ಲಿ ಪಾಲ್ಗೊಂಡರು.
ಕಾಲೇಜಿನ ವಿಜ್ಞಾನ ಶಿಕ್ಷಕ ಎಸ್.ಎಸ್.ಗೌರಿ ನಾಲ್ಕು ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಿ, ಅಭಿಯಾನಕ್ಕೆ ಮೊದಲ ಕೊಡುಗೆಯಾಗಿ ನೀಡಿ ನಾಲ್ಕು ಕೆಜಿ ಸಕ್ಕರೆ ಬಹುಮಾನವಾಗಿ ಪಡೆದರು. ನಂತರ ಹಲವು ಶಿಕ್ಷಕರು, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಸಂಗ್ರಹಿಸಿ ಅಭಿಯಾನಕ್ಕೆ ನೀಡಿ ಪರಿಸರ ಪ್ರೇಮ ಮೆರೆದರು.
ವಿ.ಬಿ.ದರಬಾರ ವಿದ್ಯಾವರ್ಧಕ ಸಂಘದ ಮುಖ್ಯಸ್ಥ ರಾಜೇಶ್ ದರಬಾರ ಮಾತನಾಡಿ, ಪ್ಲಾಸ್ಟಿಕ್ನಿಂದ ಆಗುವ ತೊಂದರೆ ಅರಿತು ಈ ಅಭಿಯಾನ ಆರಂಭಿಸಲಾಗಿದೆ ಎಂದರು.