ವಿಜಯಪುರ: ಹೆದ್ದಾರಿ ರಸ್ತೆ ಕಾಮಗಾರಿ ಕಳಪೆ ವಿಚಾರವಾಗಿ ಸ್ಥಳ ವೀಕ್ಷಣೆಗೆ ಬಂದ ಮಾಜಿ ಸಚಿವ ಎಂ ಸಿ ಮನಗೂಳಿ ಅವರನ್ನ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದಲ್ಲಿ ನಡೆಯುತ್ತಿದ್ದ ಶಿರಾಡೋಣ - ಲಿಂಗಸುಗೂರು ರಾಜ್ಯ ಹೆದ್ದಾರಿ 41ರ ರಸ್ತೆ ಕಾಮಗಾರಿ ನಡೆಯುತ್ತಿತ್ತು. 9 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ನಿರ್ಮಾಣದಲ್ಲಿ ಕಳಪೆ ಕಾಮಗಾರಿಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳಪೆ ಡಾಂಬರ್ ಬಳಕೆ, ಮಣ್ಣಿನ ಮೇಲೆ ಡಾಂಬರೀಕರಣ, ನಿಯಮ ಉಲ್ಲಂಘಿಸಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ ಎಂದು ಕಾಮಗಾರಿಯನ್ನು ತಾಂಬಾ ಗ್ರಾಮಸ್ಥರು ಬಂದ್ ಮಾಡಿಸಿದ್ದರು. ವಿಷಯ ತಿಳಿದು ರಸ್ತೆ ಕಾಮಗಾರಿ ವೀಕ್ಷಣೆಗೆ ಶಾಸಕ ಎಂ ಸಿ ಮನಗೂಳಿ ಆಗಮಿಸಿದಾಗ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಕಾಮಗಾರಿಯನ್ನೇ ಬಂದ್ ಮಾಡಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ಕಾಮಗಾರಿ ಮಾಡುವುದಾದರೆ ರಸ್ತೆಯೇ ಬೇಡ ಎಂದು ಶಾಸಕರ ಜತೆ ವಾಗ್ವಾದ ಮಾಡಿದರು. ಶಾಸಕರ ಎದುರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂದಾಜು ಪ್ರಕಾರವೇ ಕಾಮಗಾರಿ ನಡೆಸುವ ಭರವಸೆಯನ್ನು ಶಾಸಕ ಮನಗೂಳಿ ನೀಡಿದರು. ಕೊರೊನಾ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ವಿಳಂಬವಾಗಿದೆ. ರಸ್ತೆ ನಿರ್ಮಾಣ ಕಾರ್ಯ ಕಳಪೆಯಾಗದಂತೆ ಎಚ್ಚರವಹಿಸೋದಾಗಿ ಶಾಸಕರು ಗ್ರಾಮಸ್ಥರಿಗೆ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಶಾಂತರಾದರು.