ವಿಜಯಪುರ: ಕೊರೊನಾ ಸಮಯದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಾರಿಗೆ ಇಲಾಖೆ ಡಿಸಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಪ್ಪ ಗಂಗಾಧರ್ ಹಾಗೂ ಆಡಳಿತಾಧಿಕಾರಿ ಪಿ ಬಿ ರಿಸಾಲ್ದಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸಂಬಳ ನೀಡಲು 500 ಕೋಟಿಯಷ್ಟು ಹಣ ಬಿಡುಗಡೆ ಮಾಡಿದೆ. ಆದರೆ ಈ ಘಟಕದ ವ್ಯವಸ್ಥಾಪಕರು ಚಾಲಕರಿಗೆ ಕೆಲಸಕ್ಕೆ ಗೈರು ಹಾಜರಿ ಹಾಕಿ ಸಂಬಳ ಕೊಡುತ್ತಿಲ್ಲ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರಶ್ನಿಸಿದರೆ ವರ್ಗಾವಣೆ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿ ಆಡಳಿತಾಧಿಕಾರಿ ಪಿ ಬಿ ರಿಸಾಲ್ದಾರ್ ಹಾಗೂ ಡಿ ಸಿ ಸಿದ್ದಪ್ಪ ಗಂಗಾಧರ ಅವರನ್ನು ವರ್ಗಾವಣೆ ಮಾಡಬೇಕೆಂದು ನೌಕರರ ಸಂಘದವರು ಸಾರಿಗೆ ಸಚಿವರಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಡಿಸಿ ವರ್ಗಾವಣೆಯಾಗಿದ್ದು, ಆಡಳಿತಾಧಿಕಾರಿಯನ್ನು ಸಹ ವರ್ಗಾವಣೆ ಮಾಡಿ ಎಂದು ನೌಕರರು ಪ್ರತಿಭಟನೆಗಿಳಿದಿದ್ದಾರೆ.
ಅಧಿಕಾರಿಗಳು ಹಲವು ವರ್ಷಗಳಿಂದ ಕಾರ್ಮಿಕರಿಗೆ ಒಂದಲ್ಲ ಒಂದು ರೀತಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿ ವರ್ಗಾವಣೆ ಮಾಡಿಲ್ಲ. ಇತ್ತ ದಿನದಿಂದ ದಿನಕ್ಕೆ ಕಾರ್ಮಿಕರ ಮೇಲೆ ಆರೋಪಗಳ ಸುರಿಮಳೆ ಸುರಿಸಿ ಸಂಬಳ ಕಟ್ ಮಾಡುತ್ತಿದ್ದಾರೆಂದು ಕಾರ್ಮಿಕರು ವಿಭಾಗೀಯ ನಿಯಂತ್ರಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಲಾಖೆಯ ಡಿಸಿ ಸಿದ್ದಪ್ಪ ಗಂಗಾಧರ, ನನ್ನ ಮೇಲೆ ಸುಳ್ಳು ಆರೋಪ ಮಾಡಿ ವರ್ಗಾವಣೆ ಮಾಡಿಸಿದ್ದಾರೆ. ಪರಿಶೀಲನೆ ನಡೆಸಿ ವರ್ಗಾವಣೆ ಮಾಡಲಿ ಎಂದಿದ್ದಾರೆ.