ವಿಜಯಪುರ : ಮೇ 2ರೊಳಗಾಗಿ ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡದಿದ್ದರೆ, ಈಗ ಸಚಿವ ಈಶ್ವರಪ್ಪ ಬಂಡಾಯ ಎದ್ದಂತೆ ಎಲ್ಲ ಸಚಿವರು ಬಂಡಾಯ ಏಳಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಪಕ್ಷದಲ್ಲಿ ಹಿರಿಯರಿದ್ದಾರೆ. ಅವರ ಖಾತೆಯಲ್ಲಿಯೂ ಸಿಎಂ ಹಾಗೂ ಅವರ ಪುತ್ರ ಕೈ ಆಡಿಸುತ್ತಿದ್ದಾರೆ. ಹೀಗಾಗಿ, ಈಶ್ವರಪ್ಪ ಬೇಸತ್ತು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಬಿಜೆಪಿ ಮುಖಂಡರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಈಶ್ವರಪ್ಪರಂತೆ ಎಲ್ಲರೂ ಸರ್ಕಾರದ ವಿರುದ್ಧ ನೇರ ಬಂಡಾಯ ಸಾರಲಿದ್ದಾರೆ ಎನ್ನುವ ಮೂಲಕ ಸಚಿವ ಈಶ್ವರಪ್ಪ ಪರ ಯತ್ನಾಳ್ ಬ್ಯಾಟ್ ಬೀಸಿದರು.
ಬಿಜೆಪಿ ರಾಜ್ಯ ಉಸ್ತುವಾರಿ ವಹಿಸಿರುವ ಅರುಣಸಿಂಗ್ ವಿರುದ್ಧವೂ ಕಿಡಿಕಾರಿದ ಯತ್ನಾಳ್ ಅವರು, ರಾಜ್ಯ ಬಿಜೆಪಿಗೆ ಉಸ್ತುವಾರಿಯಾಗಿದ್ದಾರೆ ಹೊರತು ಯಡಿಯೂರಪ್ಪ ಹಾಗೂ ಅವರ ಪುತ್ರನಿಗೆ ಅಲ್ಲ. ಕರ್ನಾಟಕ ಬಿಜೆಪಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಬೇಕು. ಅದು ಬಿಟ್ಟು ಯಡಿಯೂರಪ್ಪ ಹಾಗೂ ಅವರ ಪುತ್ರನ ಪರ ವಕಾಲತ್ತು ವಹಿಸುವುದನ್ನು ಬಿಡಬೇಕು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಸರ್ಕಾರದಲ್ಲಿರುವ ಎಲ್ಲ ಸಚಿವರು ವಿಜಯೇಂದ್ರ ಮಾತು ಕೇಳಬೇಕಾಗಿದೆ. ವಿಜಯೇಂದ್ರ ಬಳಿ ಹೋದರೆ ಆತನ ಎದುರು ಕೈ ಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಈ ರೀತಿಯ ಬೆಳವಣಿಗೆಯಿಂದಲೇ ಕಳೆದ ಒಂದು ವರ್ಷದಿಂದ ಸುಮ್ಮನಿದ್ದ ಈಶ್ವರಪ್ಪ ಕೊನೆಗೂ ಮೌನ ಮುರಿದು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಮೇ 2ರೊಳಗೆ ಬಿಎಸ್ ವೈ ಬದಲಾಗದ್ದಿದ್ದರೆ ಸರ್ಕಾರದಲ್ಲಿ ಮಹಾ ಸ್ಫೋಟವಾಗಲಿದೆ ಅನ್ನೋ ಮೂಲಕ ಬಿಎಸ್‌ವೈ ಅಧಿಕಾರದಿಂದ ಕೆಳಗಿಳಿಯುವ ಮುನ್ಸೂಚನೆ ನೀಡಿದರು. ಸಿಎಂ ಪುತ್ರ ವಿಜಯೇಂದ್ರ ಈಶ್ವರಪ್ಪ ಅವರ ಖಾತೆ ಅಲ್ಲದೇ ಎಲ್ಲ ಸಚಿವರ ಖಾತೆಯಲ್ಲಿ ಕೈ ಆಡಿಸುತ್ತಿದ್ದಾರೆ.
ಹೀಗಾಗಿ, ಎಲ್ಲ ಖಾತೆಯನ್ನು ವಿಜಯೇಂದ್ರ ಅವರಿಗೆ ಬಿಟ್ಟು ಕೊಡುವುದು ಒಳ್ಳೆಯಯದು ಎಂದು ತಮ್ಮ ಅಸಮಾಧಾನ ಹೊರ ಹಾಕಿದರು. ಈ ಹಿಂದೆ ತಮಗೂ ಸಚಿವ ಸ್ಥಾನದ ಅವಕಾಶ ಸಿಕ್ಕಿತ್ತು. ಆದರೆ, ವಿಜಯೇಂದ್ರ ಮುಂದೆ ಕೈಜೋಡಿಸಿ ನಿಲ್ಲಲು ಆಗುವುದಿಲ್ಲ ಎಂದು ಸಚಿವ ಸ್ಥಾನ ಧಿಕ್ಕರಿಸಿದ್ದೆ ಎಂದರು.