ವಿಜಯಪುರ: ಮಹಾತ್ಮಾ ಗಾಂಧೀಜಿಯನ್ನು ಸಾಯಿಸಿದ ವ್ಯಕ್ತಿಗೆ ದೇಶ ಭಕ್ತ ಅಂತಾರೆ, ಜೊತೆಗೆ ಅವರ ದೇವಸ್ಥಾನ ಕಟ್ಟುತ್ತೇವೆ ಅನ್ನುವುದು ಬಹಳ ಬೇಸರದ ಸಂಗತಿ ಎಂದು ನಟ ಚೇತನ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇತನ್, ಹಿಂದುತ್ವದ ಹೇರಿಕೆ ಅನ್ನೋದೆ ದೇಶದ್ರೋಹದ ಕೆಲಸ ಅದನ್ನು ನಾವು ಒಪ್ಪೋದಿಲ್ಲ. ಅಂಬೇಡ್ಕರ್ ಸಿದ್ಧಾಂತ ಸಂವಿಧಾನವನ್ನು ನಾವು ಒಪ್ಪುತ್ತೇವೆ. ಆದರೆ, ಬ್ರಿಟಿಷ್‌ರ ವಿರುದ್ಧ ಯುದ್ಧದಲ್ಲಿ ವೀರಮರಣನ್ನಪ್ಪಿದ ಟಿಪ್ಪು ಜಯಂತಿ ತಗೆದು ಹಾಕುವುದು ನನಗೆ ಅಷ್ಟೊಂದು ಒಪ್ಪಿಗೆ ಇಲ್ಲ ಎಂದು ಹೇಳಿದರು. ಸಮಾನತೆಯ ಕನಸನ್ನು ನಾವು ಕಾಣಬೇಕೆ ಹೊರತು ಯಾವುದೇ ಧಾರ್ಮಿಕ ಹೇರಿಕೆ ಅಲ್ಲ. ವಿಜಯಪುರದ ಆದಿಲ್ ಶಾಹಿಯ ಸಾಧನೆ ಕೂಡಾ ಜನತೆಗೆ ತಿಳಿಯಬೇಕೆಂದು ಹೇಳಿದರು.
ಅಲೆಮಾರಿ ಜನಾಂಗದ ಅಭಿವೃದ್ಧಿ:
ವಿಜಯಪುರ ಜಿಲ್ಲೆಯ ಕುರಿತು ನನಗೆ ಆಸಕ್ತಿ ಹೆಚ್ಚಿದೆ. 70 ವರ್ಷದಿಂದ ಅಲೆಮಾರಿ ಜನಾಂಗ ನಮ್ಮ ಮುಂದೆ ಇದ್ದಾರೆ. ಅವರು ಇವತ್ತಿಗೂ ಅನ್ಟಚೇಬಲ್, ಅನ್ಸೀಯೇಬಲ್ ಆಗಿ ಬದುಕುತ್ತಿದ್ದಾರೆ ಎಂದರು. ಈಗಾಗಲೇ ಅಲೆಮಾರಿ ಜನಾಂದವರ ಜತೆ ಸಾಕಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಜಿಲ್ಲೆಯಲ್ಲೂ ಕೂಡಾ ನಾನು ಸಂಚರಿಸಿ ಅಲೆಮಾರಿ ಜನಾಂಗದವರನ್ನು ಭೇಟಿ ಆಗಿದ್ದೇನೆ, ಅವರ ಏಳಿಗೆ ಬಹು ಮುಖ್ಯ ಎಂದರು. ಜೊತೆಗೆ ಅವರ ಅಭಿವೃದ್ಧಿಗೆ ಫೆ.15 ರ ನಂತರ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡುವ ಉದ್ದೇಶ ಕೂಡಾ ಇದೆ ಎಂದು ತಿಳಿಸಿದರು.