ವಿಜಯಪುರ: ಕೊರೊನಾ ಭೀತಿ ಹಿನ್ನೆಲೆ ಕಳೆದ 4 ತಿಂಗಳಿಂದ ಶಾಲೆಗಳಿಗೆ ಬೀಗ ಹಾಕಲಾಗಿದೆ. ಕೆಲವು ಶ್ರೀಮಂತ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಮೂಲಕ ವಿದ್ಯಾಭ್ಯಾಸ ನಡೆಸುತ್ತಿದ್ದರೆ, ಇತ್ತ ಸರ್ಕಾರಿ ಶಾಲೆ ಮಕ್ಕಳು ವಿದ್ಯಾಭ್ಯಾಸವಿಲ್ಲದೇ ಅವರ ಶಿಕ್ಷಣ ವ್ಯವಸ್ಥೆ ಮೂಲೆಗುಂಪಾಗಿದೆ. ಇಂಥ ಮಕ್ಕಳಿಗಾಗಿ ಇಲ್ಲೊಬ್ಬ ಸರ್ಕಾರಿ ಶಾಲೆ ಶಿಕ್ಷಕ ಸ್ವಯಂ ಪ್ರೇರಣೆಯಿಂದ ಮನೆ, ತೋಟದ ಮನೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೆಂಗಲಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹನುಮಂತ ಕಾತರಕಿ ಎಂಬುವರು, ಕೊರೊನಾ ವೈರಸ್ ಹರಡಿದ ಮೇಲೆ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳಿಗೆ ಆಗುತ್ತಿರುವ ಅಡ್ಡ ಪರಿಣಾಮ ಹೋಗಲಾಡಿಸಲು ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿಯಾಗಿ ನಿತ್ಯ ಪಾಠ ಮಾಡುತ್ತಿದ್ದಾರೆ.
ಹಲವು ವಿದ್ಯಾರ್ಥಿಗಳ ಮನೆಗಳು ತೋಟದಲ್ಲಿವೆ, ಕೆಲವು ವಿದ್ಯಾರ್ಥಿಗಳ ಮನೆ ರಸ್ತೆಗಳೇ ಇಲ್ಲದ ಸ್ಥಳದಲ್ಲಿವೆ. ಇಂತಹ ಹಲವು ಸಮಸ್ಯೆಗಳಿದ್ದರೂ ಯಾವುದನ್ನೂ ಲೆಕ್ಕಿಸಿದೇ ಪಾಠ ಮಾಡುವುದರಲ್ಲಿ ಖುಷಿ ಕಂಡುಕೊಂಡಿದ್ದಾರೆ ಈ ಶಿಕ್ಷಕ.
ಅಲ್ಲದೆ ಕೊರೊನಾ ವೈರಸ್ ಹರಡಬಾರದು ಎಂದು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುತ್ತಿರುವುದಲ್ಲದೇ, ಮಕ್ಕಳಿಗೂ ಅವರ ಪೋಷಕರಿಗೂ ಮಾಸ್ಕ್ ಸುರಕ್ಷತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈ ಹಿಂದೆ ಕಳೆದ 4 ವರ್ಷಗಳಿಂದ ಬೇಸಿಗೆ ರಜೆಯಲ್ಲಿ ಇದೇ ಕೆಲಸ ಮಾಡುತ್ತಿದ್ದರು.
ನಲಿ-ಕಲಿ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಶಿಕ್ಷಕ ಹನುಮಂತ ಕಾತರಕಿ, ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಮಕ್ಕಳ ಕಲಿಕೆಗೆ ಪೂರಕವಾಗಿರುವ ಕೆಲವು ಕನ್ನಡ, ಇಂಗ್ಲಿಷ್ ಭಾಷೆಯ ವಿಡಿಯೋ, ಅಕ್ಷರಗಳ ಚಿತ್ರ, ಕಥೆ ಮತ್ತು ಅಂಕಿ-ಅಂಶದ ಚಿತ್ರಗಳನ್ನು 1 ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ಮೊಬೈಲ್ ವಿಡಿಯೋ ಮೂಲಕ ಪಾಠ ಹೇಳುತ್ತಿದ್ದಾರೆ.
ಶಿಕ್ಷಕ ಕಾತರಕಿ ಅವರ ಕಾರ್ಯ ಶ್ಲಾಘಿಸಿ ಪ್ರಾಥಮಿಕ ಮತ್ತು ಪ್ರಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗುಣಗಾನ ಮಾಡಿದ್ದರು. ಅಲ್ಲದೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಹ ಶಿಕ್ಷಕನ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಸದ್ಯ ಗ್ರಾಮದಲ್ಲಿರುವ 100ಕ್ಕೂ ಹೆಚ್ಚು ಮಕ್ಕಳ ಕಲಿಕೆ ಸಹಕಾರಿಯಾಗಿದೆ. ಶಿಕ್ಷಣ ವ್ಯವಸ್ಥೆ ಬಲ ಪಡಿಸಲು ಇಂಥ ಶಿಕ್ಷಕ ಗ್ರಾಮಕ್ಕೊಬ್ಬರು ಇದ್ದರೆ ಸಾಕು ಎನ್ನುತ್ತಿದ್ದಾರೆ ಊರಿನ ಹಿರಿಯರು.