ವಿಜಯಪುರ: ಲಾರಿ ಹರಿದ ಪರಿಣಾಮ ವ್ಯಕ್ತಿವೋರ್ವ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ನಗರದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿ ಅವಟಿ ಬಡಾವಣೆಯ ನಿವಾಸಿ ಬಡೇಸಾಬ್ ಮುಲ್ಲಾ ಎಂದು ತಿಳಿದು ಬಂದಿದೆ. ಮೃತನು ಖಾಸಗಿ ವಾಹನ ಚಾಲಕನಾಗಿದ್ದು, ಇತ್ತೀಚೆಗೆ ರಿಯಲ್ ಎಸ್ಟೇಟ್ ಬ್ಯುಸಿನೆಸ್‍ನಲ್ಲಿ ತೊಡಗಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಇನ್ನು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಲಾರಿ ಚಾಲಕ ನಾಪತ್ತೆಯಾಗಿದ್ದು, ಪೊಲೀಸರು ಆತನ ಹುಡುಕಾಟ ಮುಂದುವರೆಸಿದ್ದಾರೆ.
ಘಟನೆಯ ವಿವರ: ಬಸವೇಶ್ವರ ವೃತ್ತದಲ್ಲಿ ಬಡೇಸಾಬ ತಮ್ಮ ಬೈಕ್ನಲ್ಲಿ ಹೊರಟಿದ್ದ ವೇಳೆ ತಂಗಡಗಿ ರಸ್ತೆಯ ಮೂಲಕ ಬರುತ್ತಿದ್ದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿಯ ಚಕ್ರಕ್ಕೆ ಸಿಲುಕಿಕೊಂಡ ಬಡೇಸಾಬ್ ಮುಲ್ಲಾ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇದೇ ವೇಳೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಮುದ್ದೇಬಿಹಾಳ ಠಾಣೆಯ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.