ವಿಜಯಪುರ:ಜಿಪಂ ಸಾಮಾನ್ಯ ಸಭೆಯಲ್ಲಿ ಜಾತಿ ನಿಂದನೆ ಪ್ರಕರಣ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಜಿಪಂ ಸದಸ್ಯರೊಬ್ಬರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಕುರಿತು ಚರ್ಚೆ ನಡೆಸಲಾಯಿತು.ಅಭಿವೃದ್ಧಿ ಕೇಳಿದರೆ ಜಾತಿ ನಿಂದನೆ ಕೇಸ್ ಹಾಕ್ತಾರೆ. ಅಧಿಕಾರಿಗಳಿಂದ ಪೊಲೀಸ್ ಠಾಣೆ, ನ್ಯಾಯಾಲಯದ ಕಟ್ಟೆ ಏರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಾತಿ ನೋಡಿ ಅಧಿಕಾರಿಗಳಿಂದ ಅಭಿವೃದ್ಧಿ ವಿಷಯ ಮಾತಾಡಬೇಕಿದೆ. ಜನಪ್ರತಿನಿಧಿಗಳು ಜನರ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಕೇಳಬಾರದೆ ಎಂದು ಸದಸ್ಯ ಸಾಬು ಮಾಶ್ಯಾಳ ಸೇರಿದಂತೆ ಅನೇಕ ಸದಸ್ಯರು ಪ್ರಶ್ನಿಸಿದರು.
ಕೃಷಿ ಹೊಂಡದ ಬಿಲ್ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಅಧಿಕಾರಿ ಹಾಗೂ ಸದಸ್ಯ ಸಾಬು ಮಾಶ್ಯಾಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿ ಜಾತಿ ನಿಂದನೆ ಕೇಸ್ ದಾಖಲಿಸಿದ್ದು, ಅದರ ದಾಖಲೆ ಒದಗಿಸುವಂತೆ ಸದಸ್ಯರು ಸಭೆ ಆರಂಭದಲ್ಲೇ ಪಟ್ಟು ಹಿಡಿದರು. ಅಧಿಕಾರಿಯ ಜಾತಿ ಯಾವುದೆಂದೇ ನಮಗೆ ಗೊತ್ತಿಲ್ಲ. ಹೀಗಿದ್ದಾಗ ಜಾತಿ ನಿಂದನೆ ಹೇಗಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಅಧಿಕಾರಿ ಸಂತೋಷ್ ಇನಾಮದಾರ್, ಜಾತಿ ನಿಂದನೆ ಕೇಸ್ ಸಿಬ್ಬಂದಿ ವೈಯಕ್ತಿಕ ನಿರ್ಧಾರ. ಪ್ರಕರಣ ನ್ಯಾಯಾಲಯ ಮಟ್ಟದಲ್ಲಿ ಇರುವ ಕಾರಣ ಆ ಬಗ್ಗೆ ಏನನ್ನೂ ಹೇಳುವ ಸ್ಥಿತಿಯಲ್ಲಿ ನಾವಿಲ್ಲ ಎಂದರು.ಅಭಿವೃದ್ಧಿ ಬಗ್ಗೆ ವಿಚಾರಿಸಿದರೆ ಅಧಿಕಾರಿಗಳು ಜಾತಿ ನಿಂದನೆ ಕೇಸ್ ಹಾಕುತ್ತಾ ಹೋದರೆ ಹೇಗೆ?. ಇನ್ಮುಂದೆ ಯಾರೂ ಯಾವ ಅಧಿಕಾರಿಗೂ ಅಭಿವೃದ್ಧಿ ಬಗ್ಗೆ ಕೇಳಲೇಬಾರದಾ?. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಆ ಬಗ್ಗೆ ಸಮಗ್ರ ತನಿಖೆ ಆಗಬೇಕು. ಇನ್ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ ಉಮೇಶ್ ಕೋಳಕೂರ, ಪ್ರತಿಭಾ ಪಾಟೀಲ, ನೀಲಮ್ಮ ಮೇಟಿ, ಬಿ.ಆರ್. ಯಂಟಮಾನ ಸೇರಿದಂತೆ ಹಲವರು ಒತ್ತಾಯಿಸಿದರು.
ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಹಾಗೂ ಉಪಾಧ್ಯಕ್ಷ ಪ್ರಭು ದೇಸಾಯಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಸಿಇಒ ವಿಕಾಸ್ ಸುರಳಕರ್ ಅವರಿಗೆ ಸೂಚಿಸಿದರು.