ವಿಜಯಪುರ: ಮಹಾಮಾರಿ ಕೊರೊನಾ ವೈರಸ್ ವಿಜಯಪುರ ಜಿಲ್ಲೆಯಲ್ಲಿ ರಣಕೇಕೆ ಹಾಕುತ್ತಿದೆ. ಇಂದು ಒಂದೇ ದಿನದಲ್ಲಿ ಹೊಸದಾಗಿ 7 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರಿಂದ ಆರೇಂಜ್ ಝೋನ್ನಲ್ಲಿದ್ದ ಜಿಲ್ಲೆ ಈಗ ರೆಡ್ ಝೋನ್ಗೆ ತಿರುಗುವ ಲಕ್ಷಣಗಳು ಕಾಣುತ್ತಿವೆ.
ಏಪ್ರಿಲ್ 11ರವರೆಗೆ ಒಂದು ಪಾಸಿಟಿವ್ ಪ್ರಕರಣ ದಾಖಲಾಗದ ವಿಜಯಪುರ ಜಿಲ್ಲೆಯಲ್ಲಿ 4 ದಿನಗಳಲ್ಲಿ 17 ಪಾಸಿಟಿವ್ ಪ್ರಕರಣ ದಾಖಲಾಗುವ ಮೂಲಕ ಜಿಲ್ಲೆಯ ಜನತೆಯನ್ನು ಆತಂಕಕ್ಕೆ ದೂಡಿದೆ. ವಿಚಿತ್ರವೆಂದರೆ ಕೇವಲ 2 ಕುಟುಂಬಗಳಿಂದ ಇಷ್ಟೆಲ್ಲಾ ಪಾಸಿಟಿವ್ ಪ್ರಕರಣ ದಾಖಲಾಗಿವೆ.
ನಿಜವಾಗಿ ಈಗ ಜಿಲ್ಲೆಯಲ್ಲಿ ಲಾಕ್ಡೌನ್ ಆರಂಭವಾದಂತಿದೆ. ಇಂದು ಮತ್ತೆ 7 ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರುತ್ತಿಲ್ಲ.
ಪಾಸಿಟಿವ್ ಪ್ರಕರಣದ ಹಿಸ್ಟರಿ:
ಏಪ್ರಿಲ್ 12 ರಂದು 60 ವರ್ಷದ ಮಹಿಳೆಯಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ನಂತರ ಅಂದೇ ಮತ್ತೊಂದು ಕುಟುಂಬದ 5 ಜನರಲ್ಲಿ ಪಾಸಿಟಿವ್ ರಿಪೋರ್ಟ್ ದೃಢಪಟ್ಟಿತ್ತು. ಜೊತೆಗೆ ಮಹಿಳೆಯ ಪತಿ ಸಂಶಯಾಸ್ಪದ ಕೊರೊನಾದಿಂದ ಏಪ್ರಿಲ್ 12ರ ಸಂಜೆ ಮೃತಪಟ್ಟಿದ್ದರು. ನಂತರ ಏಪ್ರಿಲ್ 14 ರಂದು ಮೃತ ವ್ಯಕ್ತಿಯಲ್ಲಿಯೂ ಕೊರೊನಾ ಪಾಸಿಟಿವ್ ಇದ್ದದ್ದು ಖಚಿತವಾಗಿತ್ತು.
ನಂತರ ಏಪ್ರಿಲ್ 14 ರಂದು ಮೂವರಲ್ಲಿ ಕೊರೊನಾ ಪಾಸಿಟಿವ್ ಇರೋದು ವರದಿ ಬಂದಿತ್ತು. ಏ.12 ರಂದು 60 ವರ್ಷದ ಮಹಿಳೆ, 13 ವರ್ಷದ ಬಾಲಕ, 10 ವರ್ಷದ ಬಾಲಕ, 12 ವರ್ಷದ ಬಾಲಕಿ, 20 ವರ್ಷದ ಯುವತಿ, 49 ವರ್ಷದ ವ್ಯಕ್ತಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ನಂತರ ಏ.14 ರಂದು ಈ ಹಿಂದೆ 12 ರಂದು ಕೊರೊನಾ ಶಂಕಿತನಾಗಿ ಮೃತಪಟ್ಟಿದ್ದ 69 ವರ್ಷದ ವ್ಯಕ್ತಿಯ ವರದಿಯೂ ಪಾಸಿಟಿವ್ ಎಂದು ಬಂದಿತ್ತು. ನಂತರ ಏ.15 ರಂದು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. 38 ವರ್ಷದ ಮಹಿಳೆ, 28 ವರ್ಷದ ಮಹಿಳೆ, 25 ವರ್ಷದ ಪುರುಷನಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಇದಾದ ಬಳಿಕ ಏ. 16 ರಂದು ಒಟ್ಟು 7 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 12 ವರ್ಷದ ಬಾಲಕ, 65 ವರ್ಷದ ಪುರುಷ, 66 ವರ್ಷದ ಪುರುಷ, 37 ವರ್ಷದ ಪುರುಷ, 70 ವರ್ಷದ ಮಹಿಳೆ, 55 ವರ್ಷದ ಮಹಿಳೆ ಹಾಗೂ ಒಂದೂವರೆ ವರ್ಷದ ಹೆಣ್ಣು ಮಗುವಿನಲ್ಲಿ ಮಹಾಮಾರಿ ಇರೋದು ಪತ್ತೆಯಾಗಿದೆ.
ಸದ್ಯ ಪಾಸಿಟಿವ್ ಬಂದ ಎಲ್ಲಾ 17 ಪ್ರಕರಣಗಳಿಗೆ ನೆರೆಯ ಮಹಾರಾಷ್ಟ್ರವೇ ಮೂಲ ತಾಣವಾಗಿದೆ. 17 ಜನರು ಎರಡು ಕುಟುಂಬಕ್ಕೆ ಸೇರಿದವರಾಗಿದ್ದು, ರೋಗಿ ನಂಬರ್ 221 ಹಾಗೂ ಕುಟುಂಬದವರು ಮಹಾರಾಷ್ಟ್ರದ ಇಚಲಕರಂಜಿಗೆ ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳಿದ್ದರು. ಅಲ್ಲಿಯೇ ಒಂದು ದಿನ ತಂಗಿದ್ದು, ಮಾರನೇ ದಿನ ವಾಪಸ್ ಬಂದಿದ್ದರು. ಇನ್ನು ರೋಗಿ ನಂಬರ್ 228 ಮೂಲಕ ಮತ್ತೊಂದು ಕುಟುಂಬಕ್ಕೆ ಮಾರಕ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಇವರ ಮನೆಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆ ಮಹಾರಾಷ್ಟ್ರದ ಪುಣೆಯಲ್ಲಿರುವ ಮೃತನ ಮಗಳು ಪತಿ ಹಾಗೂ ಮಕ್ಕಳು ಆಗಮಿಸಿದ್ದರು. ಅವರಲ್ಲಿ ಪಾಸಿಟಿವ್ ಇದ್ದ ಸೋಂಕು ರೋಗಿ ನಂಬರ್ 228ರ ಮೂಲಕ ಮನೆ ಮಂದಿಗೆ ಹರಡಿದೆ. ಸದ್ಯ ಕೇವಲ 2 ಕುಟುಂಬದ ಸದಸ್ಯರಲ್ಲಿ ಮಾತ್ರ ಕೊರೊನಾ ಪಾಸಿಟಿವ್ ಕಂಡುಬಂದಿದೆ.