ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಬಸರಕೋಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರತಿ ವಾಲೀಕಾರ ಕಲಾ ವಿಭಾಗದಲ್ಲಿ ಶೇ.93.33ರಷ್ಟು ಫಲಿತಾಂಶ ಬಂದಿದ್ದು, ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಹುಟ್ಟಿನಿಂದಲೇ ವಿಕಲಚೇತನರಾಗಿರುವ ಈಕೆಗೆ ಒಂದು ಸರಿಯಾಗಿ ಕಣ್ಣು ಕಾಣುವುದಿಲ್ಲ. ಆದರೂ ಶಿಕ್ಷಣದಲ್ಲಿ ಸಾಧನೆ ಮಾಡಿದ್ದಾರೆ.
ಜಿಲ್ಲೆಗೆ ಕೀರ್ತಿ ತಂದಿರುವ ಈಕೆ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾಳೆ. ರಾಜ್ಯಶಾಸ್ತ್ರದಲ್ಲಿ 100ಕ್ಕೇ 100 ಅಂಕ ಪಡೆದಿರುವ ಆರತಿ ಇತಿಹಾಸದಲ್ಲಿ 98, ಸಮಾಜಶಾಸ್ತ್ರದಲ್ಲಿ 96, ಶಿಕ್ಷಣಶಾಸ್ತ್ರದಲ್ಲಿ 96, ಕನ್ನಡದಲ್ಲಿ 98, ಇಂಗ್ಲಿಷ್ನಲ್ಲಿ 72 ಅಂಕ ಪಡೆದುಕೊಂಡಿದ್ದಾರೆ.
ಹುಟ್ಟುತ್ತಲೇ ಒಂದು ಕಣ್ಣು ಕಾಣದೇ ವಿಕಲತೆ ಹೊಂದಿರುವ ಆರತಿ ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜ ಹಾಗೂ ಅಜ್ಜಿಯ ಆಶ್ರಯದಲ್ಲಿ ಬೆಳೆದಿದ್ದಾರೆ. ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗದವರು ತನ್ನ ಓದಿಗೆ ನೀರೆರೆದು ಪೋಷಿಸಿದ್ದಾರೆ ಎಂದು ವಿದ್ಯಾರ್ಥಿನಿ ಆರತಿ ತಿಳಿಸಿದ್ದು, ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ವಿಕಲಚೇತನ ಗುರುತಿನ ಕಾರ್ಡ್ಗೆ ಪರದಾಟ : ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ರೂ ಆರತಿ ಅವರಿಗೆ ಅಂಗವಿಕಲರ ಕಾರ್ಡ್ ಸಿಕ್ಕಿಲ್ಲ. ಸಾಕಷ್ಟು ಬಾರಿ ಅರ್ಜಿ ಹಿಡಿದುಕೊಂಡು ಮುದ್ದೇಬಿಹಾಳಕ್ಕೆ ಅಲೆದಾಡಿದ್ದೇನೆ. ಸರ್ಕಾರಿ ಆಸ್ಪತ್ರೆಗೂ ಹೋಗಿ ಬಂದಿದ್ದೇನೆ ಆದರೂ ಪ್ರಯೋಜನಾವಾಗಿಲ್ಲ ಎಂದರು. ಗುರುತಿನ ಚೀಟಿ ಸಿಕ್ಕರೆ ಸರ್ಕಾರದ ಸೌಲಭ್ಯ ಪಡೆದುಕೊಂಡು ಓದು ಮುಂದುವರಿಸುವ ಹಂಬಲ ವ್ಯಕ್ತಪಡಿಸಿದರು.