ವಿಜಯಪುರ: ಇಬ್ಬರು ಅತೃಪ್ತ ಶಾಸಕರು ನಿನ್ನೆ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆದರೆ, ಸಿದ್ದರಾಮಯ್ಯ ಅವರ ಕರೆಗಳನ್ನು ಸ್ವೀಕರಿಸಿಲ್ಲ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ಆಗಬೇಕಿದೆ. ಈ ಕಾಯಿದೆಯ 10ನೇ ಶೆಡ್ಯೂಲ್‌ಗೆ ತಿದ್ದುಪಡಿಯಾಗಬೇಕಿದೆ. ಅನರ್ಹ ಶಾಸಕರ ಕುರಿತು ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಬೇಕಿದೆ ಎಂದು ಹೇಳಿದರು.
ಅತೃಪ್ತರಿಗೆ ಝೀರೋ ಟ್ರಾಫಿಕ್ ವಿಚಾರ ಪ್ರಸ್ತಾಪಿಸಿದ ಅವರು, ನಾನೇ ಝೀರೋ ಟ್ರಾಫಿಕ್ ಬಳಸಿಲ್ಲ. ಇನ್ನೂ ಅತೃಪ್ತರಿಗೆ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು. ಯಡಿಯೂರಪ್ಪ ರಾಜಕೀಯ ಜೀವನದ ಕಟ್ಟ ಕಡೆಯ ಹಂತದಲ್ಲಿದ್ದಾರೆ. ದುರಾಸೆಯಿಂದ ಸಿಎಂ ಆಗಿದ್ದಾರೆ. ಅವರ ಪಕ್ಷದಲ್ಲಿರುವ ವಯಸ್ಸಿನ ಪರಿಮಿತಿಯಿಂದಾಗಿ ಈಗ ತರಾತುರಿಯಲ್ಲಿ ಸಿಎಂ ಆಗಿದ್ದಾರೆ. ಇಲ್ಲದಿದ್ದರೆ, ಅವರೂ ಸಹ ಬಿಜೆಪಿ ಮಾರ್ಗದರ್ಶನ ಸಮಿತಿ ಸೇರಬಹುದು ಎಂಬ ಆತಂಕ ಯಡಿಯೂರಪ್ಪ ಅವರಲ್ಲಿತ್ತು. ಈಗ ರಚನೆಯಾಗಿರುವ ಸರ್ಕಾರವೇ ಅನೈತಿಕವಾಗಿದೆ ಎಂದು ಎಂ ಬಿ ಪಾಟೀಲ್ ದೂಷಿಸಿದರು.