ವಿಜಯಪುರ: ಬೆಂಗಳೂರಿನ ಖಾಸಗಿ ಶಾಲೆ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಕಾಂಡೊಮ್ಸ್ , ತಂಬಾಕು ಪತ್ತೆಯಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಸಹ ಮಾಡಲಾಗಿದೆ. ಇನ್ನೂ ಕಾಂಡೊಮ್ಸ್ ನೀಡಿದ ಮೆಡಿಕಲ್ ಅಂಗಡಿಗೂ ಸದ್ಯದಲ್ಲಿ ನೋಟಿಸ್ ಜಾರಿ ಮಾಡಲಾಗುವುದು. ಸೂಕ್ತ ಉತ್ತರ ನೀಡದಿದ್ದರೆ ಅಂಗಡಿ ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಹೇಳಿದರು.
ಗುರುವಾರ ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಎಜಿಒಗಳ ಜತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಶಾಲೆಯ ಕೆಲ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಇಂಥ ವಸ್ತು ಸಿಕ್ಕಿರುವುದು ಆತಂಕ ಮೂಡಿಸಿದೆ. ಅವರಲ್ಲಿ ಲೈಂಗಿಕ ಆಸಕ್ತಿ ತೋರಿಸುತ್ತಿದೆ.
ಮೆಡಿಕಲ್ ಶಾಪ್ ನವರು ತಮ್ಮ ಬಿಜಿನೆಸ್ ಹೆಚ್ಚಿಸಿ ಕೊಳ್ಳಲು 18 ವರ್ಷದ ಒಳಗಿನ ಬಾಲಕರಿಗೆ ಕಾಂಡೊಮ್ಸ್ ತಂಬಾಕು ಸರಬರಾಜು ಮಾಡಿದ್ದಾರೆ. ಇದು ದೊಡ್ಡ ಅಪರಾಧ .ಸರಬರಾಜು ಮಾಡಿದ ಮೆಡಿಕಲ್ ಶಾಪ್ ಗೆ ಶೀಘ್ರ ನೋಟಿಸ್ ಜಾರಿ ಮಾಡಲಾಗುವದು ಎಂದು ತಿಳಿಸಿದರು.
18 ವರ್ಷದವರಿಗೆ ಮದ್ಯ ಬೇಡ : ಮೊದಲು 21ವರ್ಷ ಮೇಲ್ಪಟ್ಟವರಿಗೆ ಮದ್ಯದಂಗಡಿ ಪ್ರವೇಶ ಹಾಗೂ ಪಾರ್ಸಲ್ ತೆಗೆದು ಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ 18 ವರ್ಷ ಆದವರಿಗೆ ಮದ್ಯ ದಂಗಡಿ ಪ್ರವೇಶ ಹಾಗೂ ಪಾರ್ಸಲ್ಗೆ ಅವಕಾಶ ನೀಡಿರುವುದನ್ನು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅವೈಜ್ಞಾನಿಕ ನಿರ್ಧಾರ: ಇದು ಅವೈಜ್ಞಾನಿಕ ನಿರ್ಧಾರವಾಗಿದೆ. ಈ ಮೂಲಕ ಯುವಕರಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಈ ಬಗ್ಗೆ ಸರ್ಕಾರದ ಜತೆ ಮಾತನಾಡುವೆ. ತಕ್ಷಣ ಮದ್ಯಪಾನ ವಿಚಾರವಾಗಿ ಕೈಗೊಂಡ ನಿರ್ಣಯ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಹೊಸ ಆ್ಯಪ್ ಸೃಷ್ಟಿ: ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆಯಿಂದ ಹಾಳಾಗುತ್ತಿದ್ದಾರೆ. ಪೋಷಕರು ಸಹ ಮಕ್ಕಳಿಗೆ ಮೊಬೈಲ್ ನೀಡಿ ತಾವು ನೆಮ್ಮದಿಯಾಗಿರಲು ಬಯಸುತ್ತಾರೆ. ಅದೇ ಮೊಬೈಲ್ ನಿಂದ ಮಕ್ಕಳು ನೋಡಬಾರದ ದೃಶ್ಯ ನೋಡಿ ಹಾಳಾಗುತ್ತಾರೆ. ಅವರನ್ನು ನಿಯಂತ್ರಣಕ್ಕೆ ತರಲು ಮೊಬೈಲ್ ಆ್ಯಪ್ ಟಚ್ ಸ್ಕ್ರೀನ್ ಬದಲಿಗೆ ಫಿಂಗರ್ ಕ್ರೀಸ್ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಶಿಕ್ಷಣ ಸಂಸ್ಥೆಯಲ್ಲಿ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಬೋಧಿಸುವುದು ಇಂದು ಅವಶ್ಯಕ. ಮಕ್ಕಳಿಗೆ ಟಿನೇಜ್ ನಲ್ಲಿ ಲೈಂಗಿಕ ಶಿಕ್ಷಣ ನೀಡಿದರೆ ಅವರು ದಾರಿ ತಪ್ಪುವುದಿಲ್ಲ, ಈ ಕುರಿತಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆ: ಇದಕ್ಕೂ ಮುನ್ನ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗಣ್ಣಗೌಡ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರು ಹಿರಿಯ ಅಧಿಕಾರಿಗಳ ಜತೆ ನಡೆದುಕೊಳ್ಳುವ ರೀತಿ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಇದರ ಜತೆ ಸರ್ಕಾರಿ ಶಾಲೆಯಲ್ಲಿ ಕಂಪೌಂಡ್ ನಿರ್ಮಾಣ, ಬಾಲಕಿಯರಿಗೆ ಶೌಚಾಲಯ ನಿರ್ಮಾಣ ಕುರಿತು ಚರ್ಚೆ ನಡೆಯಿತು. ಇದರ ಜತೆ ಬಾಲ್ಯ ವಿವಾಹ ವಿಜಯಪುರ ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದು ಕಾಲ ಕಾಲಕ್ಕೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.
ಇದನ್ನೂಓದಿ:ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿಗೆ ಕಿರುಕುಳ.. ಕಾರಲ್ಲಿ 10 ಮೀಟರ್ ಎಳೆದೊಯ್ದ ಕಿಡಿಗೇಡಿ!