ಕಾರವಾರ: ಎರಡು ವರ್ಷ ಕಳೆದರೂ ಪ್ರಾರಂಭವಾಗದ ಕುಡಿಯುವ ನೀರಿನ ಕಾಮಗಾರಿ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಧರಣಿ ನಡೆಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಹೊನ್ನಾವರ ತಾಲೂಕಿನ ಪಾವಿನಕುರ್ವಾ ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ 18 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲಾಗಿತ್ತಾದರೂ ಕಾಮಗಾರಿ ಕಂಪ್ಲೀಟ್ ಆಗದೆ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಕಳೆದ ಬಾರಿ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಸದಸ್ಯ ಶಿವಾನಂದ ಕಡತೋಕಾ, ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಕಾಮಗಾರಿ ಬಗ್ಗೆ ಇಂದಿನ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ ಶಿವಾನಂದ ಕಡತೋಕ, ಕಾಮಗಾರಿ ಪ್ರಾರಂಭಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿರುವುದಾಗಿ ಸಭೆಯ ಗಮನಕ್ಕೆ ತಂದಾಗ ಸಿಟ್ಟಾದ ಸದಸ್ಯ ಶಿವಾನಂದ, ಇಂದು ಬೆಳಗ್ಗೆ ಅದೇ ಪ್ರದೇಶಕ್ಕೆ ತೆರಳಿ ಬಂದಿದ್ದೇನೆ. ಆದರೆ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿರುವುದಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ರು.
ಅಧಿಕಾರಿಗಳು ಹೇಳುವುದು ನಿಜವೇ ಆಗಿದ್ರೆ ನನ್ನ ಸದಸ್ಯತ್ವ ಸ್ಥಾನಕ್ಕೆ ಈಗಲೇ ರಾಜೀನಾಮೆ ನೀಡುತ್ತೇನೆ. ಮಾಹಿತಿ ಸುಳ್ಳಾದ್ರೆ ಅಧಿಕಾರಿ ರಾಜೀನಾಮೆ ನೀಡಲಿ. ಈ ಬಗ್ಗೆ ಸಭೆಗೆ ಸ್ಪಷ್ಟ ಮಾಹಿತಿ ನೀಡುವವರೆಗೂ ಅಧ್ಯಕ್ಷರ ಮುಂದೆಯೇ ಧರಣಿ ನಡೆಸಿದ್ರು. ಕೊನೆಗೆ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಇಒ ಎಂ.ಪ್ರಿಯಾಂಗಾ, ಕಾಮಗಾರಿ ಪ್ರಾರಂಭವಾಗದೇ ಇದ್ದಲ್ಲಿ ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಿಇಒ ಮನವೊಲಿಕೆ ಬಳಿಕ ಧರಣಿ ಹಿಂಪಡೆದ ಸದಸ್ಯ ಶಿವಾನಂದ ಕಡತೋಕ, ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದ್ರು.
ಇದನ್ನೂ ಓದಿ:ಕರ್ನಾಟಕದ ಬಳಿಕ ಮೇಘಾಲಯ ಕಲ್ಲಿದ್ದಲು ಗಣಿಯಲ್ಲಿ ದುರಂತ: 6 ಕಾರ್ಮಿಕರ ದುರ್ಮರಣ