ಕಾರವಾರ: ಒಂದೆಡೆ ಮನೆಯ ತುಂಬಾ ಬಿದ್ದಿರುವ ಕಸದ ರಾಶಿ. ಇನ್ನೊಂದೆಡೆ ಕಸದ ರಾಶಿಯಲ್ಲೇ ಮಲಗಿ ಜೀವನ ಸಾಗಿಸುತ್ತಿರುವ ಮಹಿಳೆ. ಈ ದೃಶ್ಯ ಕಂಡು ಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ. ಹೀಗೆ ಕಸದ ರಾಶಿಯಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆಯ ಹೆಸರು ಚಂದ್ರಕಲಾ ಚಂದ್ರಕಾಂತ ಕಾಂಬ್ಳೆ. ವಯಸ್ಸು 57.
ಕಳೆದ ಎರಡು ವರ್ಷಗಳ ಹಿಂದೆ ತನ್ನ ಒಬ್ಬ ಮಗನನ್ನು ಈಕೆ ಕಳೆದುಕೊಂಡಿದ್ದಳು. ಆರು ತಿಂಗಳ ಹಿಂದೆಯಷ್ಟೇ ತನ್ನ ಪತಿಯನ್ನು ಕಳೆದುಕೊಂಡಳು. ಪತಿಯ ಅಗಲಿಕೆಯಿಂದ ನೊಂದ ಚಂದ್ರಕಲಾ ಹಾಸಿಗೆ ಹಿಡಿದಿದ್ದಳು. ಈಗಿರುವ ಓರ್ವ ಮಗನೂ ಮಾನಸಿಕ ಅಸ್ವಸ್ಥನಾಗಿದ್ದು, ತನ್ನ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಾಗದ ಪರಿಸ್ಥಿತಿ ಆತನದು. ಹೀಗಾಗಿ ಅನ್ನ ಆಹಾರ ಸರಿಯಾಗಿ ಇಲ್ಲದೇ ಚಂದ್ರಕಲಾ ಮನೆಯೊಳಗೆ ಕಸದ ರಾಶಿಯಲ್ಲಿಯೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಹಿಂದೆ ಆರೋಗ್ಯವಾಗಿದ್ದಾಗ ತಾನೇ ತನ್ನ ಮಾನಸಿಕ ಅಸ್ವಸ್ಥ ಮಗನನ್ನು ಸಾಕುತ್ತಿದ್ದಳು. ಬಳಿಕ ಹಾಸಿಗೆ ಹಿಡಿದಿದ್ದಳು. ಈ ವಿಷಯ ಜನಶಕ್ತಿ ವೇದಿಕೆ ಎನ್ನುವ ಸಂಸ್ಥೆಗೆ ತಿಳಿದು ಮಹಿಳೆಯ ನೆರವಿಗೆ ಬಂದಿದ್ದಾರೆ. ಮಹಿಳೆಯನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಜೊತೆಗೆ ಸಂಸ್ಥೆಯ ಕಾರ್ಯಕರ್ತರು ಮಹಿಳೆಯ ಮನೆಯನ್ನು ಸ್ವಚ್ಛಗೊಳಿಸಲು ತೀರ್ಮಾನಿಸಿದ್ದಾರೆ.
ಸದ್ಯ ಮಹಿಳೆಯು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಮ್ಮ ಇಲಾಖೆಯ ಸಾಂತ್ವನ ಕೇಂದ್ರದಲ್ಲಾಗಲಿ ಅಥವಾ ಅನಾಥಾಶ್ರಮದಲ್ಲಿ ಉಳಿಸುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮಹಿಳೆ ಸೂಕ್ತ ಆರೈಕೆಯ ಅಗತ್ಯವಿದ್ದು ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ಮೂರು ವರ್ಷದ ಬಾಲಕಿ ಮೇಲೆ ದೊಡ್ಡಪ್ಪನಿಂದ ಅತ್ಯಾಚಾರ: ಪೈಶಾಚಿಕ ಕೃತ್ಯಕ್ಕೆ ಮಗು ಬಲಿ