ಕಾರವಾರ: ಮುಂಬೈ ದಾಳಿ ವೇಳೆ ಬಂದೂಕು ಸಹಿತ ಪಾಕಿಸ್ತಾನದ ಸಾಕ್ಷಿ ಸಿಕ್ಕರೂ ಸೇನೆಗೆ ಪ್ರತಿದಾಳಿ ನಡೆಸಲು ಅವಕಾಶ ನೀಡದೆ ಕಾಂಗ್ರೆಸ್ ಸುಮ್ಮನಿತ್ತು. ಆದರೆ, ನಮ್ಮ ಸರ್ಕಾರ ಪಾಕಿಸ್ತಾನ ನಡೆಸಿದ ಪ್ರತಿ ದಾಳಿಗೂ ಸಾಕ್ಷಿಯೊಂದಿಗೆ ತಕ್ಕ ಉತ್ತರ ನೀಡಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಹೇಳಿದರು.
ಕಾರವಾರದಲ್ಲಿ ಆಯೋಜಿಸಿದ್ದ ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರರ ಅಡಗುತಾಣಗಳಿಗೆ ಹೋಗಿ ದಾಳಿ ಮಾಡಿದಾಗ ಯಾವ ದೇಶವೂ ನಮ್ಮ ಎದುರು ಮಾತನಾಡಲಿಲ್ಲ. ನಾವು ಸಾಕ್ಷಿಗಳನ್ನು ಇಟ್ಟು ಮಾತನಾಡುತ್ತೇವೆ. ಇಂತಹ ನಿರ್ಧಾರದಿಂದ ಇಂದು ಪಾಕಿಸ್ತಾನವನ್ನು ಒಬ್ಬಂಟಿಯಾಗಿ ನಿಲ್ಲಿಸಿ ಆ ದೇಶವನ್ನು ಬ್ಲಾಕ್ ಲಿಸ್ಟ್ನಲ್ಲಿ ಇಡುವಲ್ಲಿ ನಾವು ಸಫಲರಾಗುತ್ತಿದ್ದೇವೆ ಎಂದರು.
ಆದರೆ, ಈ ಹಿಂದೆ ಮುಂಬೈ ಬಾಂಬ್ ದಾಳಿ ವೇಳೆ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬಂದೂಕು ಸಮೇತ ಪಾಕಿಸ್ತಾನ ಪ್ರೇರಿತ ದಾಳಿ ಎಂಬ ಬಗ್ಗೆ ಸಾಕ್ಷಿ ಸಿಕ್ಕಿತ್ತು . ಸೈನ್ಯ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ತಯಾರಿ ನಡೆಸಿತ್ತಾದರೂ ಸರ್ಕಾರ ಮಾತ್ರ ಸಾಕ್ಷಿ ಸಂಗ್ರಹ ಮಾಡುತ್ತಲೇ ಕಾಲ ಕಳೆದಿತ್ತು. ಆದರೆ, ನಾವು ಉರಿ ದಾಳಿ ಬಳಿಕ ತಕ್ಕ ಉತ್ತರ ನೀಡಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸಾಹಿತ್ಯ ಬರೆಯುವ ಕಾಂಗ್ರೆಸ್ ನಾಯಕರೊಬ್ಬರು ವಾಯು ಸೇನೆಯ ಮುಖ್ಯಸ್ಥರನ್ನು ಲಯರ್ ಎಂದು ಹಾಗೂ ದಿಲ್ಲಿಯ ಕಾಂಗ್ರೆಸ್ ನಾಯಕರೊಬ್ಬರು ಆರ್ಮಿಯವರನ್ನು ಸ್ಟ್ರೀಟ್ ರೌಡಿಗಳು ಎಂದಿದ್ದಾರೆ. ಕಾಂಗ್ರೆಸ್ ಆರ್ಮಿ ಮತ್ತು ಏರ್ ಫೋರ್ಸ್ಅನ್ನು ಅಪಮಾನ ಮಾಡುತ್ತಿದೆ ಎಂದು ಆರೋಪಿಸಿದರು.
ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿಯಲ್ಲಿ ಕ್ರಿಶ್ಚಿಯನ್ ಮೈಕಲ್ಗೆ ಶಿಕ್ಷೆಯಾಗಿದೆ. ಆದರೆ, ನಮ್ಮ ದೇಶದಲ್ಲಿ ಆ ಹಗರಣಕ್ಕೆ ಸಿಲುಕಿದವರಿಗೆ ಇನ್ನು ಶಿಕ್ಷೆಯಾಗಿಲ್ಲ. ಹಗರಣದ ದುಡ್ಡು ಕಾಂಗ್ರೆಸ್ ಕುಟುಂಬಕ್ಕೆ ಹೋಗಿದೆ ಎಂದ ಅವರು, ಅಮೇಥಿಯಲ್ಲಿ ಕ್ರಿಶ್ಚಿಯನ್ ಮೈಕಲ್ ಕುಟುಂಬ ಮಾತ್ರ ನಿಂತಿದೆ. ಹೀಗಾಗಿ ಹೆದರಿದ ರಾಹುಲ್ ಗಾಂಧಿ ಕೇರಳಕ್ಕೆ ಓಡಿದ್ದಾರೆ. ಮೋದಿ ಕಳೆದ ಐದು ವರ್ಷದಲ್ಲಿ ಕೆಲವೊಂದು ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ಇನ್ನುಳಿದ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.