ಕಾರವಾರ: ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಆದ್ರೆ ತೀರ್ಪು ಮಹಾಜನತೆಗೆ ಬಿಟ್ಟದ್ದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲೆಯ ಹಿರಿಯ ಮುಖಂಡರು ಹಾಗೂ ನನ್ನೊಂದಿಗೆ ಕೆಲಸ ಮಾಡಿದ ಆರ್.ವಿ. ದೇಶಪಾಂಡೆ ಅವರು ಈ ಭಾಗದಲ್ಲಿ ಪ್ರಭಾವ ಹೊಂದಿರುವುದರಿಂದ ಮುಂದಾಳತ್ವ ವಹಿಸಿದ್ದಾರೆ. ಅಲ್ಲದೆ ಸಿಎಂ ಕುಮಾರಸ್ವಾಮಿ ಎರಡು ಬಾರಿ ಜಿಲ್ಲೆಯಲ್ಲಿ ಪ್ರವಾಸ ಕೈಕೊಂಡು ಪ್ರಚಾರ ನಡೆಸಿದ್ದಾರೆ. ಪ್ರಯತ್ನ ಮಾಡಿದ್ದೇವೆ. ತೀರ್ಪನ್ನು ಮಹಾಜನತೆಗೆ ಬಿಟ್ಟಿದ್ದೇವೆ ಎಂದರು.
ಈ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಪ್ರಚಾರ ನಡೆಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರೇ ಮುಂದಾಳತ್ವ ವಹಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಸುತ್ತಿನ ಮತದಾನ 14 ಕ್ಷೇತ್ರಗಳಲ್ಲಿ ನಡೆಯುತ್ತಿರುವುದರಿಂದ ಎಲ್ಲರೂ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಇದಕ್ಕೆ ಯಾರು ಕೂಡ ಬೇಜಾರು ಮಾಡಿಕೊಳ್ಳಬಾರದು. ಎಲ್ಲಾ ಜವಾಬ್ದಾರಿಯನ್ನ ದೇಶಪಾಂಡೆಗೆ ನೀಡಿದ್ದೇವೆ ಎಂದು ದೇವೇಗೌಡರು ಹೇಳಿದರು.