ಕಾರವಾರ : ಭಾರತ ಸ್ವಾತಂತ್ರ್ಯ ಹೊಂದಿ 75 ವರ್ಷ ಕಳೆದರೂ ಇನ್ನೂ ರಸ್ತೆ ಸಂಪರ್ಕವಿಲ್ಲದ ಗ್ರಾಮಗಳು ಬಹಳಷ್ಟಿವೆ ಎಂದರೆ ಅಚ್ಚರಿಯಾಗದೇ ಇರೋದಿಲ್ಲ. ಹೀಗೆ ರಸ್ತೆ ಸಮಸ್ಯೆಯಿದ್ದ ಗ್ರಾಮವೊಂದರಿಂದ ಗಾಯಾಳುವನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ. ಹಳ್ಳಗಳಿಂದ ಜಲದಿಗ್ಭಂದನಕ್ಕೊಳಗಾಗಿದ್ದ ಗ್ರಾಮದಿಂದ ಸುಮಾರು 15 ಕಿ.ಮೀ ದೂರ ಹರಸಾಹಸಪಟ್ಟು, ಹಳ್ಳ ದಾಟಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೆಂದಗಿ ಗ್ರಾಮದ ಉಮೇಶ್ ಗೌಡ ಎಂಬುವರು ಕೃಷಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕತ್ತಿ ಜಾರಿದ ಪರಿಣಾಮ ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ಆದರೆ, ಭಾರಿ ಮಳೆಯಿಂದಾಗಿ ಗ್ರಾಮದ ಬಳಿ ಹರಿಯುವ ನಾಲ್ಕು ಹಳ್ಳಗಳಿಂದಾಗಿ ಜಲದಿಗ್ಭಂದನ ಉಂಟಾಗಿದ್ದು, ಆಸ್ಪತ್ರೆಗೆ ತೆರಳಲಾಗದೇ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ಕಳೆದ ನಾಲ್ಕೈದು ದಿನಗಳ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಗ್ರಾಮಸ್ಥರು ಒಟ್ಟಾಗಿ ಜೋಳಿಗೆ ಮೂಲಕ ಗಾಯಗೊಂಡಿದ್ದ ಉಮೇಶ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು, ಸುಮಾರು 15 ಕಿ.ಮೀ ದೂರ ಕಾಡಿನ ಹಾದಿಯಲ್ಲಿ ನಡೆದುಕೊಂಡೇ ಕರೆತಂದಿದ್ದಾರೆ. ಬಳಿಕ, ಹಟ್ಟಿಕೇರಿ ಗ್ರಾಮದಿಂದ ವಾಹನದ ಮೂಲಕ ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ಸೂಕ್ತ ರಸ್ತೆಯಿಲ್ಲದ ಪರಿಣಾಮ ಗಾಯಗೊಂಡು ವಾರದ ಬಳಿಕ ಆಸ್ಪತ್ರೆಗೆ ಸೇರುವಂತಾಗಿದೆ.
ಇದನ್ನೂ ಓದಿ : ಹಿಮಾಚಲದಲ್ಲಿ ಮಳೆಯಿಂದ ರಸ್ತೆ ಹಾನಿ : 5 ಕಿಮೀ ಟ್ರಾಫಿಕ್ ಜಾಮ್ - ವಿಡಿಯೋ
ಕೆಂದಗಿ ಗ್ರಾಮವು ದಟ್ಟ ಕಾಡಿನ ನಡುವೆ ಇದ್ದು, ಯಾವುದೇ ಅಗತ್ಯ ವಸ್ತುಗಳು ಬೇಕಿದ್ದರೂ ಸಹ 18 ಕಿ.ಮೀ ದೂರದ ಹಟ್ಟಿಕೇರಿ ಗ್ರಾಮಕ್ಕೆ ಆಗಮಿಸಬೇಕು. ಈ ಗ್ರಾಮಕ್ಕೆ ತೆರಳಬೇಕು ಎಂದರೆ ಸೂಕ್ತ ರಸ್ತೆ ಇಲ್ಲ. ಬೊಕಳೆ ಹಳ್ಳ, ವತ್ತಿನ ಹಳ್ಳ, ಕಂಬದ ಹಳ್ಳ ಹಾಗೂ ಕೆಂದಗಿ ದೊಡ್ಡ ಹಳ್ಳವನ್ನು ದಾಟಿಯೇ ಬರಬೇಕು. ಮಳೆಗಾಲದಲ್ಲಂತೂ ಗ್ರಾಮಸ್ಥರ ಪಾಡು ಹೇಳತೀರದಾಗಿದ್ದು, ಹಳ್ಳಗಳು ತುಂಬಿ ಹರಿಯುವ ಸಂದರ್ಭದಲ್ಲಿ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ. ಹೀಗಾಗಿಯೇ, ಗ್ರಾಮದಲ್ಲಿನ ವಿದ್ಯಾರ್ಥಿಗಳು ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೆಲವರು ಶಾಲೆಗೆ ತೆರಳಲಾಗದೇ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ, ಗ್ರಾಮದ ಹಳ್ಳಗಳಿಗೆ ಸೇತುವೆ ನಿರ್ಮಿಸಿಕೊಟ್ಟಲ್ಲಿ ಓಡಾಟಕ್ಕೆ ಅನುಕೂಲವಾಗಲಿದೆ ಅನ್ನೋದು ಗ್ರಾಮಸ್ಥರ ಅಭಿಪ್ರಾಯ.
ಇದನ್ನೂ ಓದಿ : ಸಟ್ಲೆಜ್ ನದಿ ಪ್ರವಾಹದಿಂದ ರಸ್ತೆ ಸಂಪರ್ಕ ಕಳೆದುಕೊಂಡ ವಿವಿಧ ಗ್ರಾಮಗಳು..
ಒಟ್ಟಾರೆ, ದೇಶವು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದುತ್ತಾ ಚಂದ್ರನ ಮೇಲೆ ತಲುಪಿದರೂ ಸಹ ಇದುವರೆಗೆ ರಸ್ತೆ ಸಂಪರ್ಕವಿಲ್ಲದೇ ಕುಗ್ರಾಮಗಳಲ್ಲಿ ಜನರು ಬದುಕುವಂತಾಗಿರೋದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ಗ್ರಾಮಕ್ಕೆ ಕನಿಷ್ಠ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.
ಇದನ್ನೂ ಓದಿ : ರಸ್ತೆ ಇಲ್ಲ, ಜೋಳಿಗೆಯಲ್ಲಿ ವೃದ್ಧೆಯನ್ನು ಹೊತ್ತು ಆಸ್ಪತ್ರೆಗೆ ಕರೆದೊಯ್ದ ಗ್ರಾಮಸ್ಥರು - ವಿಡಿಯೋ