ಕಾರವಾರ : ಸ್ವರ್ಣಿಮ್ ವಿಜಯ್ ವರ್ಷದ ಅಂಗವಾಗಿ 2020ರ ಡಿಸೆಂಬರ್ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗಿದ್ದ ವಿಜಯ ಜ್ಯೋತಿಯು ಇಂದು ಉತ್ತರಕನ್ನಡ ಜಿಲ್ಲೆಯ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಗೆ ಆಗಮಿಸಿದೆ. ಈ ವೇಳೆ ನೌಕಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜ್ಯೋತಿಯನ್ನು ಗೌರವಯುತವಾಗಿ ಸ್ವಾಗತಿಸಿದರು.
1971ರ ಡಿಸೆಂಬರ್‌ನಲ್ಲಿ ಭಾರತೀಯ ಸಶಸ್ತ್ರ ಪಡೆ ಪಾಕಿಸ್ತಾನದ ಸೈನ್ಯದ ವಿರುದ್ಧ ಸೆಣಸಾಡಿ ಐತಿಹಾಸಿಕ ವಿಜಯ ಪಡೆದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಗಿತ್ತು. ಅಲ್ಲದೆ, ಎರಡನೆ ಮಹಾಯುದ್ಧದ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿ ನಡೆದಿತ್ತು.
ಈ ನಿಟ್ಟಿನಲ್ಲಿ ಭಾರತ-ಪಾಕ್ ಯುದ್ಧದ ಗೆಲುವಿನ 50 ವರ್ಷಗಳ ಸಂಭ್ರಮಾಚರಣೆಯನ್ನ 2020ರ ಡಿಸೆಂಬರ್ 16ರಿಂದ ಈ ಬಾರಿ ಸ್ವರ್ಣಿಮ್ ವಿಜಯ್ ವರ್ಷ ಎಂಬ ಹೆಸರಿನಲ್ಲಿ ದೇಶದಾದ್ಯಂತ ಆಚರಿಸಲಾಗುತ್ತಿದೆ.
ಕಾರವಾರದ ನೌಕಾನೆಲೆಗೆ ಆಗಮಿಸಿದ ಜ್ಯೋತಿಯನ್ನು ಕದಂಬ ನೌಕಾನೆಲೆಯಲ್ಲಿನ ವಿಜಯ ಚೌಕ್ ಬಳಿ ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ಬರಮಾಡಿಕೊಂಡರು. ಭಾರತೀಯ ಸೇನೆ ಮತ್ತು ನೌಕಾಪಡೆಯ ಅಧಿಕಾರಿಗಳು ಇದ್ದರು.
1971ರ ಭಾರತ ಪಾಕ್ ಯುದ್ಧದಲ್ಲಿ ನೌಕಾಸೇನೆ ಸಹ ಮಹತ್ವದ ಪಾತ್ರ ವಹಿಸಿದೆ. ವಿಶೇಷ ಕಾರ್ಯಾಚರಣೆಗಳನ್ನ ಸಹ ಕೈಗೊಳ್ಳುವ ಮೂಲಕ ಬಾಂಗ್ಲಾ ವಿಮೋಚನೆಯಲ್ಲಿ ಕಾರ್ಯನಿರ್ವಹಿಸಿದ್ದಾಗಿ ನೌಕಾಸೇನಾ ಅಧಿಕಾರಿ ಮಾಹಿತಿ ನೀಡಿದರು.
ಓದಿ: ಕಲಬುರಗಿಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಪಕ್ಕಾ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ