ಕಾರವಾರ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ಕೂಗು ಜೋರಾಗಿದೆ. ಇದಕ್ಕಾಗಿ ಟ್ವಿಟರ್ ಅಭಿಯಾನ ನಡೆಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನವನ್ನೂ ಸೆಳೆಯುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದಾರೆ.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಜನಪ್ರತಿನಿಧಿಗಳು ಆಸ್ಪತ್ರೆ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುಮಟಾ ತಾಲೂಕಿನ ಹೃದಯಭಾಗದಲ್ಲೇ 15 ರಿಂದ 20 ಎಕರೆ ಪ್ರದೇಶವನ್ನು ಗುರುತಿಸಿದ್ದು ಶೀಘ್ರದಲ್ಲೇ ಸಿಎಂ ಅವರಿಂದ ಆಸ್ಪತ್ರೆ ಘೋಷಣೆಯಾಗಲಿದೆ ಎನ್ನುವ ಭರವಸೆ ನೀಡಿದ್ದಾರೆ.
ಹೊಸದಾಗಿ ಜಾಗ ಗುರುತಿಸಿ ಅಲ್ಲಿ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಅಷ್ಟರಲ್ಲಿ ಸರ್ಕಾರದ ಅವಧಿ ಮುಗಿಯುವ ಸಾಧ್ಯತೆಯಿದ್ದು, ಮುಂದೆ ಬರುವ ಸರ್ಕಾರ ಮತ್ತೊಮ್ಮೆ ಯೋಜನೆ ಕುರಿತು ಪರಿಶೀಲಿಸುವ ಪ್ರಕ್ರಿಯೆ ನಡೆಸಬೇಕಾಗುತ್ತದೆ.
ಹೀಗಾಗಿ ಸದ್ಯ ಜಿಲ್ಲಾ ಕೇಂದ್ರ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲೇ ತುರ್ತು ಚಿಕಿತ್ಸೆ ನೀಡಲು ಅಗತ್ಯವಿರುವ ನ್ಯೂರೋ ಸರ್ಜನ್, ಕಾರ್ಡಿಯಾಲಜಿಸ್ಟ್ ಸೇರಿದಂತೆ ಯಂತ್ರೋಪಕರಣಗಳನ್ನು ನೀಡಿದರೆ ಶೀಘ್ರವಾಗಿ ಗಂಭೀರ ಪ್ರಕರಣಗಳಿಗೆ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ.
ಇದನ್ನೂ ಓದಿ: ಆಸ್ಪತ್ರೆ ಸಿಗುವವರೆಗೂ ನಿರಂತರ ಪ್ರಯತ್ನ ಮಾಡುತ್ತಲೇ ಇರುತ್ತೇವೆ: ಸ್ಪೀಕರ್ ಕಾಗೇರಿ
ಕಾರವಾರದ ಮೆಡಿಕಲ್ ಕಾಲೇಜಿಗೆ 160 ಕೋಟಿ ವೆಚ್ಚದ 450 ಹಾಸಿಗೆಯ ಆಸ್ಪತ್ರೆ ಮಂಜೂರಾಗಿದ್ದು, ಇದರೊಂದಿಗೆ ಟ್ರೌಮಾ ಸೆಂಟರ್ ಸಹ ನಿರ್ಮಾಣವಾಗಲಿದೆ. ಈಗಾಗಲೇ ಆಸ್ಪತ್ರೆ ಕಾಮಗಾರಿ ಸಹ ಪ್ರಾರಂಭವಾಗಿದೆ.
ಹೀಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೇರೆಡೆ ಜಾಗ ನೋಡಿ ಯೋಜನೆ ರೂಪಿಸಿ ಕಾಮಗಾರಿ ಆರಂಭ ಮಾಡುವುದರಿಂದ ವಿಳಂಬವಾಗಲಿದ್ದು, ಮೆಡಿಕಲ್ ಕಾಲೇಜಿನಲ್ಲೇ ಅಗತ್ಯ ಸೌಲಭ್ಯಗಳನ್ನು ಒದಗಿಸಿ ತುರ್ತು ಚಿಕಿತ್ಸೆ ಸಿಗುವಂತೆ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕಿ ರೂಪಾಲಿ ನಾಯ್ಕ ಮೆಡಿಕಲ್ ಕಾಲೇಜು ಬಳಿ ಜಾಗದ ಕೊರತೆಯಿರುವ ಹಿನ್ನೆಲೆ ಕೇಂದ್ರ ಸರ್ಕಾರದಿಂದ ಕ್ರಿಟಿಕಲ್ ಕೇರ್ ಸೆಂಟರ್ ಸ್ಥಾಪನೆ ಮಾಡಲು ಅಂಕೋಲಾ ತಾಲೂಕಿನ ಹಟ್ಟಿಕೇರಿ ಬಳಿ ಜಾಗ ಗುರುತಿಸಲಾಗಿದೆ. ಹೀಗಾಗಿ ಆದಷ್ಟು ಬೇಗ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುವಂತೆ ಎಲ್ಲ ಜನಪ್ರತಿನಿಧಿಗಳು ಸೇರಿ ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಸುಸಜ್ಜಿತ ಆಸ್ಪತ್ರೆಗೆ ಹೋರಾಟದ ಬೆನ್ನಲ್ಲೆ ತಟ್ಟಿದ ಬಿಸಿ; ಜನಪ್ರತಿನಿಧಿಗಳಿಂದ ಭರವಸೆಯ ಮಹಾಪೂರ
ಈಗಾಗಲೇ ಕೆಲ ಸಂಘಟನೆಗಳು ಘಟ್ಟದ ಮೇಲಿನ ತಾಲೂಕಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೆ, ಕೆಲವರು ಕುಮಟಾದಲ್ಲಿ ಆಗಬೇಕೆಂದು ಆಗ್ರಹಿಸಿದ್ದಾರೆ. ಹೀಗಾಗಿ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಮಂಜೂರಾದರೂ ಎಲ್ಲಿ ನಿರ್ಮಾಣವಾಗಬೇಕು ಅನ್ನೋದು ಚರ್ಚೆಗೆ ಗ್ರಾಸವಾಗಿದೆ.