ಕಾರವಾರ(ಉತ್ತರ ಕನ್ನಡ): ಶಾಲೆಗಳಲ್ಲಿ ಸಾಮಾನ್ಯವಾಗಿ ಆಟ - ಪಾಠದ ಜತೆಗೆ ಕೆಲ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ, ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ವಿಭಿನ್ನವಾಗಿ ಪಾಠ ಮಾಡಲಾಗಿದೆ.
ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ, ಅಂಕೋಲಾ ತಾಲೂಕಿನ ತೆಂಕಣಕೇರಿ ಗ್ರಾಮದ ಆದರ್ಶ ಪ್ರೌಢಶಾಲೆಯ ಮಕ್ಕಳಿಗೆ ಗದ್ದೆ ಎಂದರೆ ಏನು?, ಬೇಸಾಯ ಎಂದರೆ ಹೇಗೆ?, ನಾಟಿ ಹೇಗೆ ಮಾಡಬೇಕು ಎಂದೆಲ್ಲ ಮಾಹಿತಿ ನೀಡುತ್ತಾ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಗಿತ್ತು. ಮಕ್ಕಳು ಮಳೆಯನ್ನು ಲೆಕ್ಕಿಸದೇ ಉತ್ಸುಕತೆಯಲ್ಲಿ ಪಾಲ್ಗೊಂಡು ಗದ್ದೆಯಲ್ಲಿ ನಾಟಿ ಮಾಡುವುದು ಎಲ್ಲರ ಗಮನ ಸೆಳೆಯಿತು.
ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು: ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಸ್ಥಳೀಯರ ಸಹಕಾರದಲ್ಲಿ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕೃಷಿ ಶಿಕ್ಷಣವನ್ನು ನೀಡಲಾಯಿತು. ಪಠ್ಯದಲ್ಲಿರುವ ಕೃಷಿ ಚಟುವಟಿಕೆ ಪಾಠ ಮಾಡಬೇಕಿದ್ದ ಶಿಕ್ಷಕರು ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದುಕೊಂಡು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ರೈತರ ಪರಿಶ್ರಮವನ್ನು ಅರಿತ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಪಾಠವನ್ನು ಮಾಡುತ್ತಿರುವ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ, ತಮ್ಮಲ್ಲಿರುವ ಅನುಮಾನಗಳನ್ನು ಬಗೆಹರಿಸಿಕೊಂಡರು. ಹಾಗೆಯೇ ಮಕ್ಕಳ ನಾಟಿ ಮಾಡುವ ಉತ್ಸಾಹವನ್ನು ಕಂಡ ಪಾಲಕರು ಹಾಗೂ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.
ರೈತರ ಕಷ್ಟ ಅರಿವಿಗೆ ಬಂದಿದೆ: ಗದ್ದೆ ನಾಟಿ ಬಳಿಕ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಸಿಂಚನಾ ನಾಯ್ಕ "ಗದ್ದೆಯಲ್ಲಿ ಇಳಿದು ಸಸಿ ನಾಟಿ ಮಾಡಿರುವುದು ನಮಗೆ ವಿಶೇಷ ಅನುಭವ ನೀಡಿದೆ. ಕೃಷಿಯಲ್ಲಿ ಕೆಲಸ ಮಾಡುವ ರೈತರ ಪರಿಶ್ರಮವನ್ನು ಶಿಕ್ಕಕ್ಷರು ನಮಗೆ ಹೇಳಿ ಕೊಟ್ಟಿದ್ದಾರೆ. ಗದ್ದೆಯಲ್ಲಿ ನಾವೆಲ್ಲರೂ ಖುಷಿಯಿಂದ ಭತ್ತದ ಸಸಿಗಳನ್ನು ನೆಟ್ಟಿದ್ದೇವೆ. ಆಗ ನಮಗೆ ರೈತರು ಎಷ್ಟೊಂದು ಕಷ್ಟಪಡುತ್ತಾರೆ ಎಂಬುದು ಅರಿವಿಗೆ ಬಂದಿದೆ. ಆದರೆ ಈ ರೀತಿ ಗದ್ದೆ ನಾಟಿ ಮಾಡಿರುವುದು ಖುಷಿಯಾಗಿದೆ" ಎಂದರು.
"ಮಕ್ಕಳಿಗೆ ಪಾಠದಲ್ಲಿ ಕೃಷಿ ಚಟುವಟಿಕೆಯ ಕುರಿತು ಮೌಖಿಕವಾಗಿ ಹೇಳುವುದಕ್ಕಿಂತ ಪ್ರಾಯೋಗಿಕವಾಗಿ ತೋರ್ಪಡಿಸಿದರೆ ವಿದ್ಯಾರ್ಥಿಗಳು ವಾಸ್ತವತೆ ಅರಿಯಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಎಸ್ಡಿಎಂಸಿ ಅವರ ಸಹಕಾರದಲ್ಲಿ ಮಕ್ಕಳನ್ನು ಗದ್ದೆಗಳಿಗೆ ಕೊಂಡೊಯ್ಯಲಾಗಿತ್ತು. ಅವರಿಗೆ ಗದ್ದೆ ನಾಟಿ ಬಗ್ಗೆ ಮಾಹಿತಿ ನೀಡಲಾಯಿತು. ಮಕ್ಕಳು ಕೂಡ ತಮಗಿದ್ದ ಅನುಮಾನವನ್ನು ಕೇಳಿ ಬಗೆಹರಿಸಿಕೊಂಡರು. ಅವರ ಉತ್ಸುಕತೆಯನ್ನು ನೋಡಿದಾಗ ನಮಗೂ ಖುಷಿಯಾಗುತ್ತದೆ. ಇನ್ನು ಮುಂದೆಯೂ ಇಂತಹ ಕೃಷಿ ಚಟುವಟಿಕೆ, ಮಡಿಕೆ ತಯಾರಿಕಾ ಚಟುವಟಿಕೆ ಕೈಗೊಂಡು ಮಕ್ಕಳಿಗೆ ಶಿಕ್ಷಣ ನೀಡುವ ಉತ್ಸುಕತೆ ನಮಗೂ ಬಂದಿದೆ" ಎನ್ನುತ್ತಾರೆ ಶಿಕ್ಷಕಿ ಭಾರತಿ ನಾಯ್ಕ.
ಇದನ್ನೂ ಓದಿ: ರಸ್ತೆಯೋ, ಕೆಸರು ಗದ್ದೆಯೋ... ಬೇಸತ್ತ ಜನ ರೋಡಲ್ಲೇ ಭತ್ತದ ಸಸಿ ನಾಟಿ ಮಾಡಿದ್ರು