ಕಾರವಾರ: ಕೊರೊನಾ ಲಸಿಕೆ ಸಂಗ್ರಹ ಹಾಗೂ ಅದನ್ನು ನೀಡುವುದಕ್ಕಾಗಿ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರದ್ ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ಡ್ರೈ ರನ್ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಹಂತದಲ್ಲಿ ನೀಡುವ ಲಸಿಕೆ ಸಂಗ್ರಹಕ್ಕೆ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಹೆಚ್ಚಿನ ಲಸಿಕೆ ಸಂಗ್ರಹಕ್ಕೆ ಪಶು ಆಸ್ಪತ್ರೆಗಳಲ್ಲಿನ 18 ರೆಫ್ರಿಜರೇಟರ್ಗಳನ್ನು ಗುರುತಿಸಲಾಗಿದೆ. ಈಗಾಗಲೇ ಎಲ್ಲಾ ರೆಫ್ರಿಜರೇಟರ್ ಪರಿಶೀಲನೆ ನಡೆಸಿದ್ದು, ಎಲ್ಲವೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲು ಆರೋಗ್ಯ ಕಾರ್ಯಕರ್ತರಿಗೆ, ನಂತರ ಕೊರೊನಾ ವಾರಿಯರ್ಸ್ಗಳಿಗೆ ಲಸಿಕೆ ನೀಡಲಾಗುತ್ತದೆ. ಬಳಿಕ 55 ವರ್ಷ ದಾಟಿದವರಿಗೆ ಚುಚ್ಚು ಮದ್ದು ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಲಸಿಕೆ ನೀಡಲು ಪಿ.ಹೆಚ್.ಸಿ ಗಳಲ್ಲಿ ಮೂರು ಕೊಠಡಿಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಒಂದು ಸಾವಿರಕ್ಕೂ ಹೆಚ್ಚು ಶಾಲೆಗಳು, ಸಮುದಾಯ ಭವನಗಳನ್ನು ಬಳಸಿಕೊಳ್ಳಲು ಗುರುತಿಸಲಾಗಿದೆ ಎಂದರು.