ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂತಹ ತುರ್ತು ಸಂದರ್ಭವನ್ನು ನಾನೆಂದೂ ನೋಡಿರಲಿಲ್ಲ ಎಂದು ಮಾಜಿ ಸಚಿವ, ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ ಅರಣ್ಯ, ನದಿ, ಸಮುದ್ರ ಹೆಚ್ಚಾಗಿರುವ ಪ್ರದೇಶವಾಗಿದೆ. ನಮ್ಮಂತ ಜಿಲ್ಲೆಯಲ್ಲಿಯೇ ಪಾಸಿಟಿವಿಟಿ ರೇಟ್ ಹೆಚ್ಚಾದರೆ ಹೇಗೆ? ಇದನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರೂ ಸಹ ಸರಿಯಾಗಿ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರವಾರದಲ್ಲಿ ನಮ್ಮ ಅವಧಿಯಲ್ಲಿ ಮೆಡಿಕಲ್ ಕಾಲೇಜು ಮಾಡಿದೆವು. ಡಿಆರ್‌ಡಿಓ ಲಕ್ನೋ, ದೆಹಲಿಯಲ್ಲಿ 25 ದಿನಗಳಲ್ಲಿ 500 ಬೆಡ್ ಆಸ್ಪತ್ರೆ ಮಾಡಿದೆ. ಅದೇ ರೀತಿ ಡಿಆರ್‌ಡಿಓ ಆಸ್ಪತ್ರೆ ಕಾರವಾರದಲ್ಲೂ ಮಾಡುವಂತೆ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಆಸ್ಪತ್ರೆ ಜತೆಗೆ ಟೆಕ್ನಿಷಿಯನ್ಗಳ ಅಗತ್ಯವಿದೆ. ಟೆಕ್ನಿಷಿಯನ್ ಇಲ್ಲದಿದ್ದರೆ, ಬೆಡ್‌ಗಳು ವ್ಯರ್ಥವಾಗಲಿವೆ. ರಾಜ್ಯ ಸರ್ಕಾರದ ವ್ಯವಸ್ಥೆಯ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡ ಪರಿಣಾಮ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಅನುಭವಿ ವೈದ್ಯರನ್ನು, ನರ್ಸ್‌ಗಳನ್ನು ತಕ್ಷಣ ನೇಮಕ ಮಾಡಿಕೊಂಡು ಆರೋಗ್ಯ ಕ್ಷೇತ್ರ ಬಲಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಇಳಿಮುಖವಾಗಿದೆ ಎಂದು ಸರ್ಕಾರ ಹೇಳಿರುವ ಮಾತನ್ನು ನಂಬಿದರೆ ಅದು ಬರೀ ಭ್ರಮೆ. ಕೋವಿಡ್ ಲಕ್ಷಣಗಳಿದ್ದವರು, ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಸಹ ಪರೀಕ್ಷೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಯಾಕೆಂದರೆ, ಸರ್ಕಾರದ ಆರೋಗ್ಯ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ವೆಂಟಿಲೇಟರ್ ಬೆಡ್, ಆಮ್ಲಜನಕ ಬೆಡ್‌ಗಳ ಕೊರತೆಯಿಂದ ಬಳಲುತ್ತಿವೆ. ಒಂದೊಮ್ಮೆ ಪಾಸಿಟಿವ್ ಬಂದರೆ, ಇಂತಹ ಆಸ್ಪತ್ರೆಗಳಿಗೆ ಹೋಗಿ ಜೀವಕ್ಕೆ ಅಪಾಯವಾದರೆ ಎಂಬ ಭಯದಲ್ಲಿ ಜನರಿದ್ದಾರೆ. ಜನರ ಆತಂಕ ದೂರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಾದರೂ ವ್ಯವಸ್ಥಿತ ಕ್ರಮ ಕೈಗೊಳ್ಳಬೇಕು ಎಂದು ದೇಶಪಾಂಡೆ ಆಗ್ರಹಿಸಿದ್ದಾರೆ.
ಕೊವಿಡ್ ಎರಡನೇ ಅಲೆ ನಿಯಂತ್ರಿಸುವಲ್ಲಿ ಸರ್ಕಾರ ಎಲ್ಲ ರೀತಿಯಲ್ಲಿ ವಿಫಲವಾಗಿದೆ. ರೋಗ ನಿಯಂತ್ರಣಕ್ಕೆ ನೀಡುವ ಲಸಿಕೆ ವಿಚಾರದಲ್ಲೂ ಸರ್ಕಾರ ಮುಗ್ಗರಿಸಿದೆ. 18-44 ವರ್ಷದೊಳಗಿನವರಿಗೆ ಲಸಿಕೆ ನೀಡುವ ವಿಚಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದೆ. ರಾಜ್ಯ ಸರ್ಕಾರ ಲಸಿಕೆಯ ಲಭ್ಯತೆ ಪರಿಶೀಲಿಸದೆ, ದಿನಕ್ಕೊಂದು ಬಾಲಿಶ ಹೇಳಿಕೆ ನೀಡುತ್ತಿದೆ. ಮುಖ್ಯಮಂತ್ರಿ 5 ಮತ್ತು ಸಚಿವರ ನಡುವೆ ಹೊಂದಾಣಿಕೆ ಕೊರತೆಯಿಂದ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾರೆ. ಇಂತಹ ಸಂಧಿಗ್ಧ ಕಾಲದಲ್ಲೂ ಜನರ ವಿಶ್ವಾಸ ಗಳಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಪೂರ್ಣ ಮಾಹಿತಿಯಿಂದ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಓದಿ: ಕೋವಿಡ್ ಹೆಮ್ಮಾರಿ ಮಧ್ಯೆ ಸೆಂಟ್ರಲ್ ವಿಸ್ಟಾ ಯೋಜನೆ ಮುಂದುವರಿಸಬೇಕೆ?; ತಜ್ಞರ ಅಭಿಪ್ರಾಯವೇನು?