ಕಾರವಾರ: ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಅಂಕೋಲಾದ ಹೊನ್ನೆಬೈಲ್ ಕಡಲ ತೀರದಲ್ಲಿ ಪತ್ತೆಯಾಗಿತ್ತು. ಮೃತದೇಹ ಸಾಗಾಟಕ್ಕೆ ಸ್ವತಃ ಪಿಎಸ್ಐ ಹೆಗಲುಕೊಟ್ಟು ಶವ ಸಾಗಿಸಿದ ಘಟನೆ ನಡೆದಿದೆ.
ಅಂಕೋಲಾದ ಹೊನ್ನೆಬೈಲ್ ಕಡಲ ತೀರದಲ್ಲಿ ಸುಮಾರು 30 ರಿಂದ 40 ವರ್ಷ ಪ್ರಾಯದ ಪುರುಷನ ಶವವೊಂದು ಮೀನುಗಾರರಿಗೆ ಕಂಡಿದ್ದು, ತಕ್ಷಣ ಮೀನುಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಹೋಗಿ ನೋಡಿದಾಗ ಸಂಪೂರ್ಣ ಶವ ಕೊಳೆತು ಹೋಗಿತ್ತು. ಸುಮಾರು 20 ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಶವ ಕೊಳೆತು ಮೂಳೆಯಷ್ಟೇ ಉಳಿದುಕೊಂಡಿತ್ತು.
ದುರ್ಗಮ ಪ್ರದೇಶದಲ್ಲಿ ಶವ ಸಿಕ್ಕಿದ್ದರಿಂದ ಹೊತ್ತು ವಾಹನದವರೆಗೆ ಸಾಗಿಸಲು ಕಷ್ಟವಾಗಿತ್ತು. ಈ ಹಿನ್ನೆಲೆ ಸ್ವತಃ ಅಂಕೋಲಾ ಪಿಎಸ್‌ಐ ಉದ್ದಪ್ಪನವರ ಹೆಗಲು ಕೊಟ್ಟಿದ್ದು ವಾಹನ ಇರುವಲ್ಲಿವರೆಗೆ ಶವ ಸಾಗಣೆಗೆ ನೆರವಾಗಿದ್ದಾರೆ. ಪಿಎಸ್ಐ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇನ್ನು ಅಪರಿಚಿತ ಶವದ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಳ್ಳು ಹಂದಿ ಬೇಟೆ - ಇಬ್ಬರ ಬಂಧನ: ಮುಳ್ಳು ಹಂದಿ ಬೇಟೆಯಾಡಿ ಬೈಕ್‌ನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ತಾಲೂಕಿನ ಆನೆಗುಂದಿ ಬಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ದೀವಳ್ಳಿ ಗ್ರಾಮದ ಸಂಜಯ ದಿನ್ನಿ ನೊರೊನಾ ಹಾಗೂ ಪ್ರಕಾಶ ಫ್ರಾನ್ಸಿಸ್ ರೊಡ್ರಗಿಸ್ ಬಂಧಿತ ಆರೋಪಿಗಳು.
ಬೈಕ್ ಹಾಗೂ ಮುಳ್ಳು ಹಂದಿ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿತರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಹೆಬೈಲ್ ಗ್ರಾಮದ ಸಂದೀಪ ನಾಗೇಶ ನಾಯ್ಕ ಎಂಬಾತ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ ಸಿ. ಹಾಗೂ ಕುಮಟಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಅವರ ಮಾರ್ಗದರ್ಶನದಲ್ಲಿ ಕತಗಾಲ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆ: ಕಳೆದ ಮೂರು ದಿನಗಳ ಹಿಂದೆ ಗೋಕರ್ಣದ ರೆಸಾರ್ಟ್ವೊಂದರಲ್ಲಿ ತಂಗಿದ್ದ ಬೆಂಗಳೂರು ಮೂಲದ ಸಾಪ್ಟ್‌ವೇರ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಮೃತನನ್ನು ರಿಷಿಕೇಶ ರೆಡ್ಡಿ (35) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ರೂಂ ಬಾಡಿಗೆ ಪಡೆದಿದ್ದ ರಿಷಿಕೇಶ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯಲ್ಲಿ ಚಾಕು ಇರಿತದಿಂದ ಗಾಯಗೊಂಡಿದ್ದ ಯುವಕ ಸಾವು: ಅನೈತಿಕ ಸಂಬಂಧ ಶಂಕೆಯ ಕಾರಣ ಚಾಕು ಇರಿತದಿಂದ ಗಾಯಗೊಂಡಿದ್ದ, ಯುವಕ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಬೆಳಗಾವಿ ತಾಲೂಕಿನ ಹುಲ್ಯಾನೂರ ಗ್ರಾಮದ ಅಭಿಷೇಕ ಅಪ್ಪಯ್ಯ ಬುಡ್ರಿ (19) ಮೃತ ಯುವಕ. ಅದೇ ಗ್ರಾಮದ ಹುಲೆಪ್ಪ ಬಸಪ್ಪ ಕರಿಕಟ್ಟಿ (23) ಆ.9ರಂದು ತಡರಾತ್ರಿ ಅಭಿಷೇಕ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ. ಗಾಯಗೊಂಡಿದ್ದ ಅಭಿಷೇಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಅಭಿಷೇಕ ಮಹಿಳೆಯೊಬ್ಬರ ಜತೆಗೆ ಫೋನ್‌ನಲ್ಲಿ ಮಾತನಾಡುತ್ತಾ ಅನೈತಿಕ ಸಂಬಂಧ ಬೆಳೆಸಿದ್ದ ಎಂಬ ಅಸಮಾಧಾನದಿಂದ ಹುಲೆಪ್ಪ ಅಭಿಷೇಕನಿಗೆ ಎಚ್ಚರಿಕೆ ನೀಡಿದ್ದನಂತೆ. ಆದರೆ, ಮತ್ತೆ ಅದನ್ನೇ ಮುಂದುವರಿಸಿದ್ದರಿಂದ ಕುಪಿತಗೊಂಡಿದ್ದ ಹುಲೆಪ್ಪ ಆ.9ರಂದು ರಾತ್ರಿ ಅಭಿಷೇಕನ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕಾರವಾರ: ಬಲೆಗೆ ಬಿದ್ದ ಬೃಹತ್ ಗಾತ್ರದ ಕುರುಡೆ ಮೀನು; ಜನವಸತಿ ಪ್ರದೇಶದಲ್ಲಿ ಮುಳ್ಳಂದಿ ಮರಿ ರಕ್ಷಣೆ