ಕಾರವಾರ/ಉತ್ತರಕನ್ನಡ : ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬಿಕಾನಗರ ಪಂಚಾಯತ್ ವ್ಯಾಪ್ತಿಯ ಕೆಗದಾಳ ಗ್ರಾಮದಲ್ಲಿ ದಿನವಿಡೀ ಕಳೆದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳದಲ್ಲಿಯೇ ಸ್ಥಳೀಯ ನಿವಾಸಿಗಳ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿದರು.
'ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ' ಕಾರ್ಯಕ್ರಮದಡಿ ಕೆಗದಾಳ ಗ್ರಾಮದಲ್ಲಿ ಠಿಕಾಣಿ ಹೂಡುವ ಮೂಲಕ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ಪಂಚಾಯತ್ ನ ಸದಸ್ಯರ ಜೊತೆಗೆ ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಬಳಿಕ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಕೇಂದ್ರದಲ್ಲಿ ದಾಖಲಾದ ಅರ್ಹ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ಪಡೆದು ಪೂರಕ ಪೌಷ್ಠಿಕ ಆಹಾರದ ಕುರಿತು ಇಡಲಾದ ಆಹಾರ ಸಾಮಗ್ರಿಗಳ ಪ್ರದರ್ಶನ ವೀಕ್ಷಿಸಿದರು.
ಪೋಷಣಾ ಅಭಿಯಾನ ಯೋಜನೆಯಡಿ 4 ಜನ ಹೆಣ್ಣು ಮಕ್ಕಳಿಗೆ ಸಿಡಿಪಿಒ ಹಾಗೂ ಗ್ರಾಮ ಪಂಚಾಯತ್ ಮಹಿಳಾ ಸದಸ್ಯರಿಂದ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಕೊರೊನಾ ಹಿನ್ನಲೆ ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳನ್ನು ಮನೆ-ಮನೆಗೆ ವಿತರಿಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಮೊಟ್ಟೆ ವಿತರಿಸಲು ಸೂಚಿಸಿದರು.
ಗ್ರಾಮ ಸಂಚಾರದ ನಂತರ ವೇದಿಕೆಯ ಮೇಲೆ ಜನರ ಅಹವಾಲುಗಳಿಗೆ ಸ್ಥಳದಲ್ಲಿಯೇ ಬಗೆಹರಿಸಬಹುದಾದಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು. ಜಿಲ್ಲಾಧಿಕಾರಿಯವರಿಗೆ ನೇರವಾಗಿ ಒಟ್ಟು 27 ಅರ್ಜಿಗಳು ಬಂದಿದ್ದು, ಪ್ರತಿಯೊಂದು ಅರ್ಜಿಗಳ ಬಗ್ಗೆ ವೇದಿಕೆ ಮೇಲೆ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬಗೆಹರಿಸುವ ಕೆಲಸ ಮಾಡಲಾಯಿತು.
ಅಲ್ಲದೇ ಸ್ವೀಕೃತವಾದ ಅರ್ಜಿಗಳು ವಸತಿ ರಹಿತರಿಗೆ ನಿವೇಶನ ಕಾಯ್ದಿರಿಸುವ, ಮಂಜೂರು ಮಾಡುವಲ್ಲಿ ವಿಳಂಬ, ಆನೆ ಹಾವಳಿ, ಸಿಸಿ ರೋಡ್, ಶೌಚಾಲಯ, ಸ್ಮಶಾನ ಜಾಗ, ನಿರುದ್ಯೋಗ ಸಮಸ್ಯೆ ಸೇರಿ ಇತರೆ ಸಮಸ್ಯೆಗಳು ಒಳಗೊಂಡಿದ್ದವು.