ಕಾರವಾರ (ಉತ್ತರ ಕನ್ನಡ): ಕುಮಟಾ ತಾಲೂಕಿನ ಬೊಗ್ರಿಬೈಲ್ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಅವಧಿ ಮುಗಿದರೂ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಗ್ರಾಮಸ್ಥರು ಓಡಾಟಕ್ಕೆ ಪರದಾಡುತ್ತಿದ್ದಾರೆ.
ಬೊಗ್ರಿಬೈಲ್ ಗ್ರಾಮದಲ್ಲಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ 19.18 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದ್ದ ಡಿಆರ್‌ಎನ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ 2018ರ ಮಾರ್ಚ್ 19ರಂದು ಕಾಮಗಾರಿ ಪ್ರಾರಂಭಿಸಿದೆ. ಸೇತುವೆಯೇನೋ ಪೂರ್ಣಗೊಂಡಿದೆ. ಆದ್ರೆ ಸೇತುವೆಯ ಇಕ್ಕೆಲೆಗಳಲ್ಲಿ ಸಂಪರ್ಕ ರಸ್ತೆಯನ್ನೇ ನಿರ್ಮಿಸಿಲ್ಲ.
ನದಿ ದಾಟಲು ಗ್ರಾಮಸ್ಥರೇ ಅಡಿಕೆ ಮರದ ಏಣಿ ಮಾಡಿ ಸೇತುವೆಯ ಎರಡೂ ಬದಿಗೆ ಸಂಪರ್ಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದ್ರೆ ಸೇತುವೆ ನಿರ್ಮಾಣದ ಸಂದರ್ಭ ನದಿಗೆ ಅಡ್ಡಲಾಗಿ ಹಾಕಲಾಗಿದ್ದ ಕಲ್ಲು, ಮಣ್ಣಿನಿಂದಾಗಿ ಮಳೆಗಾಲದಲ್ಲಿ ಗ್ರಾಮಕ್ಕೆ ಪ್ರವಾಹ ಉಂಟಾಗುವ ಪರಿಸ್ಥಿತಿಯಿದೆ.
ಕಲ್ಲಬ್ಬೆ ಪಂಚಾಯತ್ ವ್ಯಾಪ್ತಿಯ ಬೊಗ್ರಿಬೈಲ್, ಉಪ್ಪಿನಪಟ್ಟಣ ಗ್ರಾಮದ ನಡುವೆ ಹರಿಯುವ ಅಘನಾಶಿನಿ ನದಿ ದಾಟಲು ಹಿಂದಿನಿಂದಲೂ ಗ್ರಾಮಸ್ಥರು ದೋಣಿಯನ್ನೇ ಬಳಸುತ್ತಿದ್ದರು. ಮಳೆಗಾಲದಲ್ಲಿ ನದಿ ಉಕ್ಕಿಹರಿಯುವುದರಿಂದ ಓಡಾಡಲು ಅನುಕೂಲವಾಗಲೆಂದು ಸೇತುವೆಗೆ ಬೇಡಿಕೆ ಇಡಲಾಗಿತ್ತು. ಆದ್ರೀಗ ಅಪೂರ್ಣಗೊಂಡು ನಿಂತಿರುವ ಸೇತುವೆ ಮೇಲೆ ಮಳೆಗಾಲದಲ್ಲಿ ಓಡಾಟ ಸಾಧ್ಯವಿಲ್ಲ. ಸೇತುವೆಗೆ ಹಾಕಲಾದ ಕಲ್ಲುಮಣ್ಣಿನಿಂದಾಗಿ ಕಳೆದ ಬಾರಿ ಪ್ರವಾಹ ಎದುರಾಗಿ ನದಿಪಾತ್ರದ ನಿವಾಸಿಗಳು ಸಂಕಷ್ಟ ಅನುಭವಿಸಿದ್ದರು. ಆದಷ್ಟು ಶೀಘ್ರದಲ್ಲಿ ಸೇತುವೆಗೆ ಸಂಪರ್ಕ ರಸ್ತೆ ನಿರ್ಮಿಸಿಕೊಡಿ ಅನ್ನೋದು ಗ್ರಾಮಸ್ಥರ ಆಗ್ರಹ.
ಇದನ್ನೂ ಓದಿ: ದತ್ತಪೀಠದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಏನು ಮಾಡುತ್ತಿದ್ದೀರಿ?: ಮುತಾಲಿಕ್
ಈ ಹಿಂದೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ ಶಾಸಕರು ಕಾರ್ಯಕ್ರಮವೊಂದರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಬಾಕಿ ಉಳಿಸಿಕೊಂಡಾಗ ಮಾತ್ರ ಜನಕ್ಕೆ ನಾವು ನೆನಪಿರುತ್ತೇವೆ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ಸೇತುವೆ ಪೂರ್ಣಗೊಳ್ಳದಿರುವುದು ಇದಕ್ಕೆ ನಿದರ್ಶನ ಎನ್ನುವಂತಾಗಿದೆ.