ಶಿರಸಿ: ಜಗತ್ತಿನಲ್ಲಿ ನೈಜವಾಗಿ ಪ್ರೀತಿಸುವವರಿಗೆ ಆಯಸ್ಸು ಕಡಿಮೆ ಅಂತಾರೆ! ಇಲ್ಲೊಂದು ಜೋಡಿಗೂ ಆ ಮಾತು ಅನ್ವಯಿಸುತ್ತೆ ನೋಡಿ. ಸಾವಲ್ಲೂ ಒಂದಾದ ಆ ಅಮರ ಪ್ರೇಮಿಗಳ ಕರುಣಾಜನಕ ಕಥೆ ಇದು.
ಪ್ರಿಯಕರನ ಜೊತೆ ಕಾಡಿನಲ್ಲಿ ಸಂತೋಷದಿಂದ ದಿನ ಕಳೆಯುತ್ತಿದ್ದೆ. ಆದರೇನು ಮಾಡೋದು ನಾವು ಒಂದಾಗಿರಲು ದೇವರಿಗೂ ಇಷ್ಟವಿರಲಿಲ್ಲ ಎಂದೆನಿಸುತ್ತೆ. ನಮ್ಮಿಬ್ಬರನ್ನು ಕೊಲ್ಲಲು ಅಕ್ಟೋಬರ್ 4ರಂದು ರಾಕ್ಷಸರಂತೆ ಶ್ವಾನಗಳು ಬೆನ್ನತ್ತಿದ್ವು. ಅವುಗಳಿಂದ ತಪ್ಪಿಸಿಕೊಂಡು ಬರುತ್ತಿದ್ದಾಗ ಕಾರೊಂದು ನನ್ನ ಪ್ರಿಯಕರನಿಗೆ ಗುದ್ದಿತು. ಸ್ಥಳದಲ್ಲೇ ಪ್ರಿಯಕರ ಬಾರದ ಲೋಕಕ್ಕೆ ಹೋದ. ಅವನು ಸತ್ತಿದ್ದು ನೋಡಿ ಮನಸ್ಸಿನಲ್ಲಿ ಏನೋ ತಲ್ಲಣ. ಕಣ್ಣಲ್ಲಿ ನೀರು ಹನಿಗೂಡಿತ್ತು. ಹೃದಯದ ಮೇಲೆ ಬೃಹತ್ ಬಂಡೆ ಬಿದ್ದಂತಾಗಿ ಬಡಿತ ನಿಂತುಹೋಯಿತು. ನಾನು ಪ್ರಿಯಕರ ಇಬ್ಬರೂ ಬಾರದ ಲೋಕ ಸೇರಿದೆವು.
ದಾಂಡೇಲಿಯ ಅಂಬೆವಾಡಿ ರೈಲ್ವೆ ಗೇಟ್ ಬಳಿ ಈ ದುರಂತ ನಡೆದಿದೆ. ಅಮರ ಪ್ರೇಮಿಗಳಾಗಿದ್ದ ಎರಡು ಜಿಂಕೆಗಳಿಗೆ ಕಾರು ಗುದ್ದಿದ್ದ ರಭಸಕ್ಕೆ ಪ್ರಿಯಕರ ತನ್ನ ಕಣ್ಮುಂದೆಯೇ ಮೃತಪಟ್ಟಿದ್ದು ನೋಡಿದ ಪ್ರೇಯಸಿಗೂ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದೆ.
ದಾಂಡೇಲಿ ಬಿ.ಇ.ಓ ಜಮೀರ್ ಮುಲ್ಲಾ ಅವರ ಕಾರಿಗೆ ಡಿಕ್ಕಿ ಹೊಡೆದಿವೆ. ಅರಣ್ಯ ಪ್ರದೇಶದಲ್ಲಿ ಜಮೀರ್ ಅವರ ಕಾರು ಚಾಲಕ ಸಂಜೀವ್ಕುಮಾರ್ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದೇ ಈ ದುರಂತ ಸಂಭವಿಸಲು ಕಾರಣ. ಘಟನೆ ಸಂಬಂಧ ಸಂಜೀವ್ನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ.
ಜಿಂಕೆಗಳ ಹೃದಯ ಮೃದು ಹಾಗೂ ಸೂಕ್ಷ್ಮ. ಅವು ಚಿಕ್ಕ ಆಘಾತವಾದರೂ ತಡೆದುಕೊಳ್ಳುವ ಶಕ್ತಿ ಅವುಗಳಿಗೆ ಇರುವುದಿಲ್ಲ. ನಾಯಿಗಳು ಬೆನ್ನತ್ತಿದ್ದರಿಂದ ಹೆದರಿವೆ. ಕಾರಿಗೆ ಜಿಂಕೆ ಡಿಕ್ಕಿ ಹೊಡೆದು ಅಲ್ಲಿಯೇ ಪ್ರಾಣ ಬಿಟ್ಟಿತ್ತು. ಇನ್ನೊಂದು ಈ ಆಘಾತ ನೋಡಿ ಮೃತಪಟ್ಟಿತ್ತು ಎಂದು ಅರಣ್ಯಾಧಿಕಾರಿ ಅಶೋಕ್ ಹೇಳಿದ್ದಾರೆ.
ಈ ವಲಯವು ರಕ್ಷಿತ ಅರಣ್ಯದ ವ್ಯಾಪ್ತಿಗೆ ಬರುತಿದ್ದು, ವೇಗದ ಮಿತಿ 20 ರಿಂದ 40 ಕಿ.ಮೀ ಇರುತ್ತದೆ. ಇಲ್ಲಿ ವೇಗದ ಮಿತಿಯ ಫಲಕ ಹಾಕಲಾಗಿದೆ. ಆದರೆ, ವಾಹನ ಸವಾರರು ಅದನ್ನು ಉಲ್ಲಂಘಿಸುತ್ತಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಪ್ರಾಣಿಗಳ ಅಪಘಾತದ ಸಂಖ್ಯೆ ಹೆಚ್ಚುತ್ತಿದೆ. ಅತೀ ವೇಗದಲ್ಲಿ ವಾಹನ ಚಲಾಯಿಸಿದ ಕಾರಣವೇ ಈ ದುರಂತ ಸಂಭವಿಸಿದೆ ಎಂದು ಅರಣ್ಯಾಧಿಕಾರಿ ವಿವರಿಸಿದ್ದಾರೆ.