ಕಾರವಾರ: ಕಳೆದೆರಡು ವರ್ಷಗಳಿಂದ ಉತ್ತರ ಕನ್ನಡದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಒಮ್ಮೆ ನೆರೆ ಪ್ರವಾಹದಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆಗೆ ಕಳೆದ ವರ್ಷ ಕೊರೊನಾ ಅಡ್ಡಿಯಾಗಿತ್ತು. ಈ ಬಾರಿ ಸಹ ಮಳೆಯ ಅಬ್ಬರದಿಂದಾಗಿ ಸಾಂಪ್ರದಾಯಿಕ ಮೀನುಗಾರರು ಕಡಲಿಗಿಳಿಯಲಾಗದೇ ಬೋಟುಗಳು ದಡದ ಮೇಲೆ ಉಳಿಯುವಂತಾಗಿದೆ.
ಪ್ರತಿವರ್ಷ ಜೂನ್ ತಿಂಗಳಿನಿಂದ 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಳ್ಳುತ್ತದೆ. ಆದರೆ ಈ ಬಾರಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶವಿದ್ದರೂ ಕಳೆದೊಂದು ತಿಂಗಳಿನಿಂದ ಕರಾವಳಿಯಲ್ಲಿ ಮಳೆಯ ಅಬ್ಬರ ಜೋರಾಗಿರುವ ಕಾರಣದಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇದರಿಂದ ಮೀನುಗಾರರಿಗೆ ಸಂಕಷ್ಟ ಎದುರಾಗಿದ್ದು, ನೂರಾರು ಸಾಂಪ್ರದಾಯಿಕ ದೋಣಿಗಳು ದಡದಲ್ಲೇ ಉಳಿದುಕೊಂಡಿವೆ.
ಯಾಂತ್ರೀಕೃತ ಬೋಟುಗಳು ಕಡಲಿಗೆ ಇಳಿಯದಿರುವುದರಿಂದ ಈ ವೇಳೆಯಲ್ಲಿಯೇ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಸಿಕೊಂಡು ಉತ್ತಮ ಆದಾಯ ಗಳಿಸಿಕೊಳ್ಳುತ್ತಿದ್ದರು. ಆಳ ಸಮುದ್ರದ ಮೀನುಗಾರಿಕೆ ಅವಧಿ ಮುಗಿಯೋ ಹಂತಕ್ಕೆ ಬಂದಿದ್ದು, ಸಾಂಪ್ರದಾಯಿಕ ಮೀನುಗಾರಿಕೆ ಕೂಡಾ ವರುಣನ ಅವಕೃಪೆಗೆ ತುತ್ತಾಗಿದೆ.
ಇನ್ನೂ ನಿಷೇಧ ಮುಂದುವರೆದರೆ ಸರ್ಕಾರ ನೆರವಿಗೆ ಬರಬೇಕೆಂದು ಮೀನುಗಾರರ ಮನವಿಯಾಗಿದೆ. ಜುಲೈ 17ರವರೆಗೆ ಮೀನುಗಾರಿಕೆ ನಿಷೇಧ ಮಾಡಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಹೇಳಿದೆ. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಸಾಂಪ್ರದಾಯಿಕ ಮೀನುಗಾರರಿಗೆ ನೆರವು ನೀಡಬೇಕಿದೆ.