ಕಾರವಾರ: ಲಾಕ್ಡೌನ್ನಿಂದಾಗಿ ಕರಾವಳಿಯಲ್ಲಿ ಕಳೆದೊಂದು ತಿಂಗಳಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಸಾಂಪ್ರದಾಯಿಕ ಮೀನುಗಾರಿಕೆಗೆ ಮತ್ತೆ ಅವಕಾಶ ಕಲ್ಪಿಸಿದ್ದು ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೋವಿಡ್-19 ಸೋಂಕು ಹರಡುವುದನ್ನು ತಪ್ಪಿಸಲು ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಇದರಿಂದ ರಾಜ್ಯದಲ್ಲಿ ಮೀನುಗಾರಿಕೆಗೆ ನಿಷೇಧ ಹೇರಿದ್ದು ಆಳಸಮುದ್ರ ಸೇರಿದಂತೆ ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್ ಬಿದ್ದಿತ್ತು. ಪರಿಣಾಮ ಉತ್ತರಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳಿಗೆ ಸಂಕಷ್ಟ ಎದುರಾಗಿತ್ತು. ಇದೀಗ ರಾಜ್ಯದಲ್ಲಿ ಲಾಕ್‌ಡೌನ್ ನಡುವೆ ಸಾಂಪ್ರದಾಯಿಕ ಮೀನುಗಾರಿಕೆಗೆ ಸದ್ಯ ಅವಕಾಶ ದೊರೆತಿದ್ದು ಮೀನುಗಾರರಿಗೆ ಜೀವ ಬಂದಂತಾಗಿದೆ.
ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದ ಸಾವಿರಾರು ಕುಟುಂಬಗಳು ಸಾಂಪ್ರದಾಯಿಕ ಮೀನುಗಾರಿಕೆಯನ್ನೆ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಆದ್ರೆ ಲಾಕ್‌ಡೌನ್ ವೇಳೆ ಮೀನುಗಾರಿಕೆಗೆ ನಿರ್ಬಂಧ ವಿಧಿಸಿದ್ದರಿಂದ ಊಟಕ್ಕೆ ಅಕ್ಕಿ ಸಿಗುತ್ತಿದ್ದರೂ , ಖರ್ಚು ಮಾಡಲು ಹಣವಿಲ್ಲದೇ ಪರದಾಡುವಂತಾಗಿತ್ತು. ಇದೀಗ ಮೀನುಗಾರಿಕೆಗೆ ಅವಕಾಶ ನೀಡಿದ ನಂತರ ಸಣ್ಣ ದೋಣಿಗಳು ಮೀನುಗಾರಿಕೆಗೆ ತೆರಳುತ್ತಿದ್ದು, ಹಿಡಿದು ತಂದ ಮೀನುಗಳನ್ನೇ ಮಾರಾಟಕ್ಕೆ ಕೊಂಡೊಯ್ಯಲಾಗುತ್ತಿದೆ. ನಗರ ಪ್ರದೇಶದಲ್ಲಿ ಹೆಚ್ಚು ಮನೆಗಳಿರುವ ವಾರ್ಡ್‌ಗಳ ಬಳಿ ಕುಳಿತು ಮೀನು ಮಾರಾಟ ನಡೆಸಲು ಮೀನುಗಾರ ಮಹಿಳೆಯರು ನಿರ್ಧರಿಸಿದ್ದು ಮೀನುಗಾರಿಕೆ ಪ್ರಾರಂಭವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.