ಕಾರವಾರ: ಹಣ ಮಾಡೋದಕ್ಕೆ ಸಾವಿರಾರು ದಾರಿಗಳಿವೆ. ಆದರೂ ಜನರು ಸುಲಭವಾಗಿ ಹಣ ಗಳಿಕೆ ಮಾಡುವ ದಾರಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಹಣದ ದುರಾಸೆಗೆ ಬಿದ್ದು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಕೆ ಮಾಡುವ ಆ್ಯಪ್ ಅನ್ನು ನಂಬಿಕೊಂಡು ಹಲವಾರು ಮಂದಿ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿ ಇದೀಗ ಪಂಗನಾಮ ಹಾಕಿಸಿಕೊಂಡು ತಲೆ ಚಚ್ಚಿಕೊಳ್ಳುವಂತಾಗಿದೆ.
ಬಿಟ್ ಕಾಯಿನ್, ಎಕ್ಸ್‌ಆರ್‌ಪಿ, ಇಥಿರಿಯಂನಂತಹ ಕ್ರಿಪ್ಟೋ ಕರೆನ್ಸಿಗಳ ಮೇಲಿನ ಹೂಡಿಕೆ ಸಾಕಷ್ಟು ಲಾಭವನ್ನು ತಂದುಕೊಟ್ಟಿವೆ ಅನ್ನೋದು ಬಹುತೇಕರಿಗೆ ತಿಳಿದಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಹೀಗೆ ಹೆಚ್ಚು ಹಣ ನೀಡುವ ಆಸೆ ತೋರಿಸಿ ಸಾವಿರಾರು ಮಂದಿಯಿಂದ ಹಣ ಹೂಡಿಸಿಕೊಂಡಿದ್ದ ಟವರ್ ಎಕ್ಸ್ಚೇಂಜ್ ಹೆಸರಿನ ಆ್ಯಪ್ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವರದಿಯಾಗಿದೆ.
ಕಂಪನಿ ಹೇಳಿದ್ದೇನು? ಮಾಡಿದ್ದೇನು?
ಈ ಟವರ್ ಎಕ್ಸ್ಚೇಂಜ್ ಟ್ರೇಡಿಂಗ್ ಆ್ಯಪ್ ಅಸಲಿಗೆ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡೋದಾಗಿ ಹೇಳಿಕೊಂಡಿತ್ತು. ಪ್ಲೇಸ್ಟೋರ್‌ನಲ್ಲಿ ಸಿಗದ ಈ ಆ್ಯಪ್ ಟ್ರೇಡಿಂಗ್‌ಗಾಗಿಯೇ ಸೃಷ್ಟಿಯಾಗಿರುವ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಮೂಲಕ ಮಾತ್ರ ಲಭ್ಯವಾಗುತ್ತದೆ. ಈ ಲಿಂಕ್ ಮೂಲಕ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ಬಳಿಕ ಮೊದಲು ಕನಿಷ್ಠ ಐದು ಸಾವಿರ ಹಣವನ್ನು ವಾಲೆಟ್‌ಗೆ ಪಾವತಿ ಮಾಡಬೇಕು.
ಏನಿದು ಕ್ರಿಪ್ಟೋ ಕರೆನ್ಸಿ ಹೂಡಿಕೆ?
ಮೊದಲ ಹಂತವಾಗಿ ಈ ವಾಲೆಟ್‌ನಲ್ಲಿರುವ ಹಣದ ಶೇಕಡಾ 12 ರಷ್ಟು ಹಣವನ್ನು ಮಾತ್ರ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡಬಹುದು. ಹೀಗೆ ಹೂಡಿಕೆ ಮಾಡಿದ ಹಣಕ್ಕೆ ದಿನಕ್ಕೆ ಶೇಕಡಾ 75ರಂತೆ ಲಾಭವನ್ನ ನೀಡುವ ಮೂಲಕ ಹೂಡಿಕೆದಾರರನ್ನು ಸೆಳೆಯಲಾಗಿತ್ತು.
ಹೀಗೆ ಬಂದ ಹಣವನ್ನು ಭಾರತೀಯ ಕರೆನ್ಸಿ ರೂಪದಲ್ಲಿ ಖಾತೆಗಳಿಗೆ ವರ್ಗಾಯಿಸಿಕೊಳ್ಳಲು ಸಹ ಅವಕಾಶ ನೀಡಿದ್ದು, ಇದನ್ನು ನಂಬಿದ ಸಾಕಷ್ಟು ಮಂದಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ್ದರು. ಆದರೆ ಈ ಆ್ಯಪ್ ಇದೀಗ ಸ್ಥಗಿತಗೊಂಡಿದ್ದು, ಜನರು ಹೂಡಿಕೆ ಮಾಡಿದ್ದ ಕೋಟ್ಯಂತರ ರೂಪಾಯಿ ಹಣವೂ ಸಿಗದಂತಾಗಿದೆ.
ಇದನ್ನು ಓದಿ: ರಷ್ಯಾದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಜಪಾನ್ನಲ್ಲೂ ನಡುಗಿದ ಭೂಮಿ
ಇನ್ನು ಈ ಟವರ್ ಎಕ್ಸ್ಚೇಂಜ್ ಆ್ಯಪ್ ಏಪ್ರಿಲ್ನಿಂದ ಕಾರ್ಯನಿರ್ವಹಣೆ ಪ್ರಾರಂಭಿಸಿದ್ದು, ಕೇವಲ ವಾಟ್ಸ್ಆ್ಯಪ್ ಗ್ರೂಪ್‌ಗಳ ಮೂಲಕವೇ ಹೂಡಿಕೆಯ ಕುರಿತು ತಿಳಿಸಲಾಗುತ್ತಿತ್ತು.
ಹೆಚ್ಚು ಹಣವನ್ನು ಆ್ಯಪ್ ವಾಲೆಟ್‌ಗೆ ಸೇರಿಸಿದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಲಾಗುತ್ತಿತ್ತು. ಅಲ್ಲದೇ ಸ್ನೇಹಿತರನ್ನು ತಮ್ಮ ಐಡಿ ಮೂಲಕ ಪರಿಚಯಿಸಿದಲ್ಲಿ ಅವರು ಹೂಡಿಕೆ ಮಾಡುವ ಹಣದಲ್ಲೂ ಶೇಕಡಾದಷ್ಟು ಲಾಭವನ್ನ ನೀಡುವ ಮೂಲಕ ಜನರನ್ನ ಹೆಚ್ಚು ಹಣ ಹೂಡಿಕೆಗೆ ಮುಂದಾಗುವಂತೆ ಮಾಡಲಾಗಿತ್ತು.
ವಾಟ್ಸ್ಆ್ಯಪ್ ಗ್ರೂಪ್‌ಗಳು ಪತ್ತೆ... ತನಿಖೆಗೆ ಮುಂದಾದ ಪೊಲೀಸ್ ಇಲಾಖೆ
ಈಗಾಗಲೇ ಜಿಲ್ಲೆಯ ಶಿರಸಿ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಈ ಆ್ಯಪ್ಗಾಗಿ ಕಾರ್ಯನಿರ್ವಹಿಸುತ್ತಿದ್ದ ವಾಟ್ಸ್ಆ್ಯಪ್ ಗ್ರೂಪ್‌ಗಳು ಪತ್ತೆಯಾಗಿದ್ದು, ಸೆಪ್ಟೆಂಬರ್ 16 ರಿಂದ ಆ್ಯಪ್ ಸ್ಥಗಿತಗೊಂಡ ಹಿನ್ನೆಲೆ ವಂಚನೆಯಾಗಿರುವುದು ಬೆಳಕಿಗೆ ಬಂದಿದೆ.
ಕೇವಲ ಉತ್ತರಕನ್ನಡ ಜಿಲ್ಲೆಯಲ್ಲಿಯೇ ಸುಮಾರು ಒಂದು ಕೋಟಿಯಷ್ಟು ವಂಚನೆಯಾಗಿರಬಹುದೆಂದು ಅಂದಾಜಿಸಲಾಗಿದ್ದು, ದೊಡ್ಡ ಪ್ರಮಾಣದ ವಂಚನೆಯಾಗಿರುವ ಹಿನ್ನಲೆ ಕೂಲಂಕಷವಾಗಿ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಒಟ್ಟಾರೆ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಆಸೆಗೆ ಬಿದ್ದ ಜನರು ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವಂತಾಗಿರೋದು ನಿಜಕ್ಕೂ ದುರಂತವೇ. ಎಲ್ಲಿಯವರೆಗೆ ಮೋಸ ಹೋಗುವವರಿರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದಕ್ಕೆ ಇದೊಂದು ತಕ್ಕ ಉದಾಹರಣೆಯಾಗಿದ್ದು ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.