ಕಾರವಾರ: ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ದೇವರ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಆತ್ಮಲಿಂಗ ಸ್ಪರ್ಶಕ್ಕೆ ನಿರ್ಬಂಧ ಹೇರಲಾಗಿದೆ.
ಹೌದು, ಲಾಕ್ ಡೌನ್ ನಿಂದಾಗಿ ಬಂದ್ ಆಗಿದ್ದ ದೇವಾಲಯಗಳನ್ನು ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ತೆರೆಯಲಾಗುತ್ತಿದೆ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಸಹ ಭಕ್ತರಿಗೆ ಪರಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮೊದಲ ಹಂತದಲ್ಲಿ 15 ದಿನಗಳವರೆಗೆ ಸ್ಥಳೀಯರಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಮಾಸ್ಕ್ ಧರಿಸಿ, ಆಧಾರ್ ಕಾರ್ಡ್ ತೋರಿಸಿ, ಸ್ಕ್ರೀನಿಂಗ್ ಗೆ ಒಳಪಟ್ಟು ದೇವಾಲಯ ಪ್ರವೇಶಿಸುವುದು ಕಡ್ಡಾಯವಾಗಿದೆ.
ಇನ್ನು ದೇವಾಲಯದಲ್ಲಿ ನಂದಿ ಇರುವ ಸ್ಥಳದ ವರೆಗೆ ಮಾತ್ರ ಭಕ್ತರಿಗೆ ತೆರಳಲು ಅವಕಾಶ ಕಲ್ಪಿಸಿದ್ದು, ದೂರದಿಂದಲೇ ಮಹಾಬಲೇಶ್ವರ ದೇವರ ದರ್ಶನ ಪಡೆಯಬೇಕಾಗಿದೆ. ಜತೆಗೆ ಆತ್ಮಲಿಂಗ ಸ್ಪರ್ಶ, ದರ್ಶನ, ಪೂಜೆಗೆ ಸಂಪೂರ್ಣ ನಿರ್ಬಂಧ ಹೇರಿದ್ದು, 15 ದಿನಗಳ ಬಳಿಕ ಹಂತ ಹಂತವಾಗಿ ಸೇವೆಗಳನ್ನು ನೀಡಲು ಮಂಡಳಿ ಮುಂದಾಗಿದೆ.
ಇಂದು ಬೆಳಗ್ಗೆಯಿಂದಲೇ ಸ್ಥಳೀಯರು ದೇವಾಲಯಗಳಿಗೆ ಆಗಮಿಸುತ್ತಿದ್ದು, ದೇವಾಲಯದ ಸಿಬ್ಬಂದಿ ಸ್ಕ್ರೀನಿಂಗ್ ಮಾಡಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ದೇವಾಲಯದಲ್ಲಿ ತೀರ್ಥ, ಪ್ರಸಾದ ಸೇವೆ ಸದ್ಯಕ್ಕೆ ಲಭ್ಯವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.