ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಬಿಸಿಲಿನ ತಾಪ ಜೋರಾಗಿದ್ದು, ಸೂರ್ಯನೆತ್ತಿಯ ಮೇಲೆ ಬರುತ್ತಿದ್ದಂತೆ ಹೊರ ಹೊರಡಲಾಗದ ಸ್ಥಿತಿ ಇದೆ.
ಇಂತಹ ಸ್ಥಿತಿಯನ್ನು ಅರಿತ ಸಂಘಟನೆಯೊಂದು ಬಾಯಾರಿದವರ ದಣಿವು ಆರಿಸಲು ತಂಪು ಪಾನೀಯವನ್ನು ಹಂಚಿ ಮಾನವೀಯತೆ ಮೆರೆದಿದೆ. ಹೌದು, ಕಾರವಾರದ ಅರಗಾ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುದ್ವಾರ ಶ್ರೀ ಗುರುನಾನಕ್ ದವ್ವಾರ್ ಕಾರವಾರ ಕೇಂದ್ರದ ಕಾರ್ಯಕರ್ತರು ತಂಪು ಪಾನೀಯ ಹಂಚಿ ಮಾನವೀಯತೆ ಮೆರೆದರು.
ಬಿಸಿಲಿನ ಜಳಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇದರಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ಇಂಥ ಸ್ಥಿತಿಯಲ್ಲಿ ಸಂಘಟನೆ ಕಾರ್ಯಕರ್ತರು ಹೆದ್ದಾರಿಯಲ್ಲಿ ಸಂಚರಿಸುವ ವಾಹನವನ್ನು ನಿಲ್ಲಿಸಿ ತಂಪು ಪಾನೀಯ ನೀಡುವ ಮೂಲಕ ಮಾನವೀಯ ಸೇವೆ ಮಾಡಿದರು.
ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು, ಪ್ರಯಾಣಿಕರು ತಂಪು ಪಾನೀಯ ಕುಡಿದು ದಣಿವು ಆರಿಸಿಕೊಂಡರು. ಅಲ್ಲದೆ ಸಂಘಟನೆಯವರ ಈ ಸೇವೆ ಕಂಡು ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.