ಕಾರವಾರ: ಅನಾರೋಗ್ಯದಿಂದ ಅಕಾಲಿಕವಾಗಿ ಮೃತಪಟ್ಟಿದ್ದ ಯೋಧ ಅಶೋಕ ಹೆಗಡೆ ಪಾರ್ಥೀವ ಶರೀರವನ್ನು ಇಂದು ಸ್ವಗ್ರಾಮಕ್ಕೆ ಕರೆತಂದು ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕುಮಟಾ ತಾಲೂಕಿನ ಕೂಜಳ್ಳಿಯ ಯೋಧ ಅಶೋಕ ಹೆಗಡೆ ಕಳೆದ ಐದಾರು ವರ್ಷದಿಂದ ಭಾರತೀಯ ಭೂ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆ ಅವರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಇಂದು ಮುಂಜಾನೆ ಪಾರ್ಥೀವ ಶರೀರವನ್ನು ಕುಮಟಾ ಕೂಜಳ್ಳಿಯ ಸ್ವಗೃಹಕ್ಕೆ ತರಲಾಗಿತ್ತು.
ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.