ಕಾರವಾರ: ಬೃಹತ್ ಬಂಡೆ ಸಹಿತ ಗುಡ್ಡವೊಂದು ರಸ್ತೆಗೆ ಕುಸಿದು ಬಿದ್ದಿದ್ದು, ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮದ ಅಪ್ಸರಕೊಂಡದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಹೊನ್ನಾವರದ ಕೆಳಗಿನೂರು ಬಳಿಯ ಅಪ್ಸರಕೊಂಡಕ್ಕೆ ತೆರಳುವ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಬೃಹತ್ ಬಂಡೆಗಲ್ಲುಗಳ ಸಹಿತ ಗುಡ್ಡ ಕುಸಿದು ರಸ್ತೆಗೆ ಬಿದ್ದಿದೆ. ವಿಷಯ ತಿಳಿದ ಸುತ್ತಮುತ್ತಲಿನ ಜನರು ತಕ್ಷಣ ಮನೆಯಿಂದ ಹೊರ ಬಂದಿದ್ದಾರೆ. ಅದೃಷ್ಟವಶಾತ್ ಗುಡ್ಡದಿಂದ ಬಂಡೆಗಳು ಕುಸಿದು ರಸ್ತೆ ಮೇಲೆ ಬಿದ್ದಿವೆ.
ರಸ್ತೆ ಕೆಳ ಭಾಗದಲ್ಲಿಯೇ ಸಾಲುಗಟ್ಟಿ ಮನೆಗಳಿದ್ದು, ಬಂಡೆ ಉರುಳಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಗುಡ್ಡ ಕುಸಿತದ ವೇಳೆ ಬೈಕ್ ಒಂದು ಮಣ್ಣಿನಡಿ ಸಿಲುಕಿ ಜಖಂಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಳೆಯಿಂದಾಗಿ ಕಳೆದ ಕೆಲ ದಿನಗಳ ಹಿಂದೆ ಹೆದ್ದಾರಿಗೆ ಬೃಹತ್ ಬಂಡೆ ಬಿದ್ದು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದ. ಇದರ ಸಮೀಪವೇ ಇದೀಗ ಗುಡ್ಡ ಕುಸಿತವಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ರಸ್ತೆ ಬಂದ್ ಆಗಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಿ ಮುಂದಾಗುವ ಅನಾಹುತ ತಪ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.