ಕಾರವಾರ: ಸಾಗರಮಾಲಾ ಯೋಜನೆಯಡಿ ಬೈತಖೋಲ್ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಮುಂದುವರೆಸದಂತೆ ಸುಪ್ರೀಂಕೋರ್ಟ್ ಮೌಖಿಕವಾಗಿ ಆದೇಶಿಸಿದೆ. ಬಂದರು ವಿಸ್ತರಣೆ ಕಾಮಗಾರಿ ಮಾಡುವಂತೆ ರಾಜ್ಯ ಹೈಕೋರ್ಟ್ ಈ ಹಿಂದೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ, ಈ ಕುರಿತ ಅರ್ಜಿ ವಿಚಾರಣೆ ಮುಗಿಯುವವರೆಗೂ ಯಾವುದೇ ರೀತಿಯ ಕಾಮಗಾರಿ ಮುಂದುವರಿಸದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಆದರೆ ಯಾವುದೇ ಅಧಿಕೃತ ತಡೆ ಆದೇಶ ನೀಡಿಲ್ಲ. ಇದೇ ವೇಳೆ, ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ವತಃ ಗೆದ್ದು, ಕಾಂಗ್ರೆಸ್‌ನ ಗೆಲ್ಲಿಸಿ ಸಿಎಂ ಆಗಲು ಸಿದ್ದರಾಮಯ್ಯ ಪಣ.. ಅಳೆದು ತೂಗಿ ಹೆಜ್ಜೆ ಇಡ್ತಿರುವ ಮೈಸೂರು ಜಾಣ..
ಬೈತಖೋಲ್ ಬಂದರು ವ್ಯಾಪ್ತಿಯಲ್ಲಿ ಒಟ್ಟು 276 ಕೋಟಿ ರೂ. ವೆಚ್ಚದ ಜಟ್ಟಿ ಹಾಗೂ ಅಲೆ ತಡೆಗೋಡೆ ಕಾಮಗಾರಿಗೆ ಮುಂದಾದಾಗ 2019ರಲ್ಲಿ ಮೀನುಗಾರರು, ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ನಿರಾಶ್ರಿತ ಮೀನುಗಾರರ ಸಂಘ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ 2021ರ ಜುಲೈನಲ್ಲಿ ತೀರ್ಪು ಪ್ರಕಟಿಸಿ, ಕಾರವಾರ ಬಂದರು ವಿಸ್ತರಣೆಗೆ ಹಸಿರು ನಿಶಾನೆ ತೋರಿತ್ತು.
ಆದರೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಅನುಮತಿಯನ್ನು ಮರುಪರಿಶೀಲಿಸಿ ಶೀಘ್ರ ಕ್ರಮ ವಹಿಸುವಂತೆ ಆದೇಶಿಸಿತ್ತು. ಅದರಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ತಿಂಗಳು ಅನುಮತಿ ನೀಡಿದೆ. ಹೀಗಾಗಿ ಹೈಕೋರ್ಟ್ ಆದೇಶವನ್ನು ಬೈತಖೋಲ್ ಬಂದರು ನಿರಾಶ್ರಿತ ಮೀನುಗಾರರ ಸಂಘ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು.