ಕಾರವಾರ: ಪುಣ್ಯಕ್ಷೇತ್ರದಲ್ಲಿ ವಿವಾಹ ಮಹೋತ್ಸವ ಜರುಗಿಸುವ ಸರ್ಕಾರದ ಯೋಜನೆಗೆ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ನಟರಾದ ಪುನೀತ್ ರಾಜ್‍ಕುಮಾರ್, ಯಶ್ ದಂಪತಿ ರಾಯಭಾರಿಗಳಾಗಲಿದ್ದಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸರ್ಕಾರದ ವತಿಯಿಂದ ಸರಳ, ಸಾಮೂಹಿಕ ವಿವಾಹ ಯೋಜನೆ ಕುರಿತ ಸಿದ್ಧತೆ ಬಗ್ಗೆ ಕಾರವಾರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಂಗಳವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇದಾಗಿದ್ದು ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ನಟರಾದ ಪುನೀತ್ ರಾಜ್‍ಕುಮಾರ್ ಹಾಗೂ ಯಶ್ ದಂಪತಿ ರಾಯಭಾರಿಗಳಾಗಿರುತ್ತಾರೆ. ಅಲ್ಲದೇ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ, ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಸಚಿವರು, ಮಠಾಧೀಶರು, ಗಣ್ಯರು ಖುದ್ದು ಈ ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೆಚ್ಚಿನ ಆದಾಯವಿರುವ 16 ಎ ದರ್ಜೆಯ ದೇವಾಲಯಗಳಲ್ಲಿ ಕಲ್ಯಾಣ ಮಂಟಪ, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳಿರುವ ದೇವಾಲಯಗಳಲ್ಲಿ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜರುಗಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಶ್ರೀ ಮಾರಿಕಾಂಬ ದೇವಾಲಯ, ಹೊನ್ನಾವರ ತಾಲೂಕು ಇಡಗುಂಜಿ ವಿನಾಯಕ ದೇವಾಲಯ ಹಾಗೂ ಭಟ್ಕಳ ತಾಲೂಕು ಶಿರಾಲಿ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇನ್ನೂ ಹೆಚ್ಚಿನ ದೇವಾಲಯಗಳಲ್ಲಿ ವಿವಾಹ ನಡೆಸಲು ಅವಕಾಶವಿದ್ದಲ್ಲಿ ಸರ್ಕಾರದ ಗಮನಕ್ಕೆ ತರಬೇಕು ಹಾಗೂ ಪ್ರಸ್ತುತ ಸದರಿ ದೇವಾಲಯಗಳಲ್ಲಿ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಷರತ್ತಿಗನುಗುಣವಾಗಿ ಅರ್ಜಿ ಸಲ್ಲಿಸಲು ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಶಾಸಕಿ ರೂಪಾಲಿ ಎಸ್.ನಾಯ್ಕ್, ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.